ADVERTISEMENT

IND vs ENG | ಸ್ಟೋಕ್ಸ್‌ ಸ್ಟ್ರೋಕ್‌ಗಳಿಗೆ ಬಸವಳಿದ ಭಾರತ

ಮ್ಯಾಂಚೆಸ್ಟರ್ ಟೆಸ್ಟ್: ದೊಡ್ಡ ಮುನ್ನಡೆ ಸಾಧಿಸಿದ ಇಂಗ್ಲೆಂಡ್; ಬ್ರೈಡನ್ ಕಾರ್ಸ್ ಬೀಸಾಟ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 23:30 IST
Last Updated 26 ಜುಲೈ 2025, 23:30 IST
ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್‌ ಸ್ಟೋಕ್ಸ್ ಅವರು ಶತಕ ಗಳಿಸಿ ಸಂಭ್ರಮಿಸಿದರು. ಅವರೊಂದಿಗೆ ಬ್ರೈಡನ್ ಕಾರ್ಸ್‌ ಇದ್ದಾರೆ  –ಪಿಟಿಐ ಚಿತ್ರ
ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್‌ ಸ್ಟೋಕ್ಸ್ ಅವರು ಶತಕ ಗಳಿಸಿ ಸಂಭ್ರಮಿಸಿದರು. ಅವರೊಂದಿಗೆ ಬ್ರೈಡನ್ ಕಾರ್ಸ್‌ ಇದ್ದಾರೆ  –ಪಿಟಿಐ ಚಿತ್ರ   

ಮ್ಯಾಂಚೆಸ್ಟರ್: ಭಾರತದ ಬ್ಯಾಟರ್‌ಗಳ ಮುಂದೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ಸಹ ಆಟಗಾರರು ರನ್‌ಗಳ ದೊಡ್ಡ ಗುಡ್ಡೆ ಪೇರಿಸಿದ್ದಾರೆ. 

ವಿಶ್ವದ ಅಗ್ರಮಾನ್ಯ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಬೆನ್ ಸ್ಟೋಕ್ಸ್‌ ಶನಿವಾರ ಅಮೋಘ ಶತಕವು ದಾಖಲೆಯ ಪುಟ ಸೇರಿತು. ಸತತ ಮೂರು ದಿನಗಳಿಂದ ಪಾರಮ್ಯ ಮೆರೆದ ಆತಿಥೇಯ ಬ್ಯಾಟರ್‌ಗಳ ಭರಾಟೆಯಿಂದಾಗಿ ಶುಭಮನ್ ಗಿಲ್ ಬಳಗವು ಸೋಲಿನ ಆತಂಕ ಎದುರಿಸುತ್ತಿದೆ. ಪ್ರಸ್ತುತ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸ್ಟೋಕ್ಸ್‌ ಮುಟ್ಟಿದ್ದೆಲ್ಲ ಚಿನ್ನವಾಗಿದೆ.

ಅವರು ಇಲ್ಲಿ ಗಳಿಸಿದ ಶತಕದ (141; 198ಎಸೆತ) ಬಲದಿಂದ  ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 157.1 ಓವರ್‌ಗಳಲ್ಲಿ 669 ರನ್ ಗಳಿಸಿತು. ಓಲ್ಡ್‌ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆತಿಥೇಯರು ಗಳಿಸಿದ  ಅತಿ ದೊಡ್ಡ ಇನಿಂಗ್ಸ್ ಮೊತ್ತ ಇದಾಗಿದೆ.  ಇದರೊಂದಿಗೆ 311 ರನ್‌ಗಳ ಮುನ್ನಡೆಯನ್ನೂ ಸಾಧಿಸಿತು. ಪ್ರವಾಸಿ ಬಳಗದ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ವೇಗಿ ಕ್ರಿಸ್ ವೋಕ್ಸ್ ಮಾಡಿದರು. ಇನಿಂಗ್ಸ್‌ನ ಮೊದಲ ಓವರ್‌ನ ಸತತ ಎರಡು ಎಸೆತಗಳಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ವಿಕೆಟ್ ಕಬಳಿಸಿದರು. ಆಗ ತಂಡದ ಖಾತೆಯಲ್ಲಿ ಒಂದೂ ರನ್ ಇರಲಿಲ್ಲ!

ADVERTISEMENT

ಈ ಹಂತದಲ್ಲಿ ಭಾರತ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಅತಂಕ ಮೂಡಿತ್ತು. ಆದರೆ ನಾಯಕ ಶುಭಮನ್ ಗಿಲ್ (ಬ್ಯಾಟಿಂಗ್ 52) ಮತ್ತು ಕೆ.ಎಲ್. ರಾಹುಲ್ (ಔಟಾಗದೇ 30) ಆತಂಕ ದೂರ ಮಾಡಿದರು. ಅದರಿಂದಾಗಿ ಚಹಾ ವಿರಾಮದ ವೇಳೆಗೆ ಭಾರತ ತಂಡವು 2 ವಿಕೆಟ್‌ಗಳಿಗೆ 86 ರನ್ ಗಳಿಸಿತು. 

ಪಂದ್ಯದ ನಾಲ್ಕನೇ ದಿನವಾದ ಶನಿವಾರ ಸ್ಟೋಕ್ಸ್ ಅವರು ಸ್ಪಷ್ಟ ಯೋಜನೆಯೊಂದಿಗೆ ಕ್ರೀಸ್‌ಗೆ ಬಂದರು. ದಿನದ ಎರಡನೇ ಓವರ್‌ ಹಾಕಿದ ಮೊಹಮ್ಮದ್ ಸಿರಾಜ್ ಎಸೆತವನ್ನು ಸ್ಟೋಕ್ಸ್ ಬೌಂಡರಿಗೆ ಬಾರಿಸಿದರು. ಇನ್ನೊಂದು ಎಸೆತದಲ್ಲಿ ಎಡಗೈ ಬ್ಯಾಟರ್ ಸ್ಟೋಕ್ಸ್ ಅವರು ಕವರ್ಸ್ ಮೂಲಕ ಬೌಂಡರಿಗೆರೆ ದಾಟಿಸಿದರು. ಶುಕ್ರವಾರದ ಆಟದಲ್ಲಿ ಸ್ಟೋಕ್ಸ್ ಅವರು ಎಸೆತಗಳನ್ನು ಟೈಮಿಂಗ್ ಮಾಡುವಲ್ಲಿ ತುಸು ಪರದಾಡಿದ್ದರು. ಸ್ನಾಯುಸೆಳೆತವೂ ಅವರನ್ನು ಕಾಡಿತ್ತು. ಆದರೆ ಜೋ ರೂಟ್ ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಭಾರತದ ಆಟಗಾರರು ಸುಸ್ತಾದರು. ಗಾಯಗೊಂಡು ನರಳಿದರು. ಶನಿವಾರ ಸ್ಟೋಕ್ಸ್‌ ಆಟವೇನೂ ಭಿನ್ನವಾಗಿರಲಿಲ್ಲ. ಫೀಲ್ಡರ್‌ಗಳಿಗೆ ಭರಪೂರ ಕೆಲಸ ಹಚ್ಚಿದರು.  ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಮೂರು ವರ್ಷಗಳ ನಂತರ ಶತಕ ಗಳಿಸಿದರು. ಇದು ಅವರಿಗೆ 14ನೇಯದ್ದಾಗಿದೆ. 

ಭಾರತ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ, ಸಿರಾಜ್, ಸ್ಪಿನ್ ಜೋಡಿ ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಅವರೆಲ್ಲರೂ ಧಾರಾಳವಾಗಿ ರನ್‌ಗಳನ್ನು ಬಿಟ್ಟುಕೊಟ್ಟರು. ಸ್ಟೋಕ್ಸ್ ಅಷ್ಟೇ ಅಲ್ಲ. 10ನೇ ಕ್ರಮಾಂಕದ ಬ್ರೈಡನ್ ಕಾರ್ಸ್ (47 ರನ್) ಕೂಡ ತಮ್ಮ ಬ್ಯಾಟಿಂಗ್ ಪ್ರತಿಭೆ ಮೆರೆದರು. ಈ ನಡುವೆ ಫೀಲ್ಡಿಂಗ್ ನಿಯೋಜನೆ, ಬೌಲಿಂಗ್ ಸಂಯೋಜನೆ ಮತ್ತು ತಂತ್ರಗಾರಿಕೆಯನ್ನು ನಿರ್ವಹಿಸುವಲ್ಲಿ ಸುಸ್ತಾಗಿದ್ದ ಶುಭಮನ್ ಗಿಲ್ ಅವರಿಗೆ ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯುವ ಅವಕಾಶವೂ ಸಿಗಲಿಲ್ಲ. ಇಂಗ್ಲೆಂಡ್ ಆಲೌಟ್ ಆಗಿ, ಎರಡನೇ ಇನಿಂಗ್ಸ್‌ ಆರಂಭವಾಯಿತು. ಆದರೆ  ಇನಿಂಗ್ಸ್‌ನ ಆರನೇ ಎಸೆತವನ್ನು ನಾಲ್ಕನೇ ಕ್ರಮಾಂಕದ ಬ್ಯಾಟರ್ ಗಿಲ್ ಅವರೇ ಬಂದು ಎದುರಿಸಬೇಕಾಯಿತು!

ಭಾರತದ ಶುಭಮನ್ ಗಿಲ್ ಮತ್ತು ಕೆ.ಎಲ್. ರಾಹುಲ್  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.