ಮುಂಬೈ:ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರಿಗೆ ವಿಸ್ಡನ್ ವಿಶ್ವದ ಶ್ರೇಷ್ಠ ಕ್ರಿಕೆಟಿಗ ಗೌರವ ಸಂದಿದೆ.
ಹೋದ ವರ್ಷ ಇಂಗ್ಲೆಂಡ್ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ರೂವಾರಿಯಾಗಿರುವ ಬೆನ್ ಸ್ಟೋಕ್ಸ್ ಅವರಿಗೆ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ವಿಸ್ಡನ್ ಅಲ್ಮನ್ಯಾಕ್ ಪ್ರಕಾಶನವು ತಿಳಿಸಿದೆ.
2005ರಲ್ಲಿ ಆ್ಯಂಡ್ರ್ಯೂ ಫ್ಲಿಂಟಾಫ್ ಅವರು ಈ ಗೌರವ ಗಳಿಸಿದ್ದರು. ಅದರ ನಂತರ ಆಯ್ಕೆಯಾಗಿರುವ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್. 28 ವರ್ಷದ ಬೆನ್, ಕಳೆದ ಆ್ಯಷಸ್ ಸರಣಿಯಲ್ಲಿ ನಡೆದಿದ್ದ ಹೆಡಿಂಗ್ಲೆ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ಅದರಿಂದಾಗಿ ಆಸ್ಟ್ರೇಲಿಯಾ ಎದುರು ಇಂಗ್ಲೆಂಡ್ ಒಂದು ವಿಕೆಟ್ ಅಂತರದ ರೋಚಕ ಜಯ ಸಾಧಿಸಿತ್ತು.
‘ಬೆನ್ ಸ್ಟೋಕ್ಸ್ ಅವರನ್ನು ಬಿಟ್ಟು ಈ ವರ್ಷ ಅಲ್ಮನ್ಯಾಕ್ ಸಿದ್ಧವಾದರೆ ಅದಕ್ಕೆ ಅರ್ಥವಿಲ್ಲ. ಅವರು ಎಲ್ಲ ಋತುಗಳು ಮತ್ತು ಹವಾಮಾನಗಳಿಗೆ ಸಲ್ಲುವ ಆಟಗಾರ. ಅವರ ಆಟವೇ ಒಂದು ಉತ್ಸವ ’ ಎಂದು ಸಂಪಾದಕ ಲಾರೆನ್ಸ್ ಬೂತ್ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಇದಕ್ಕೂ ಮುನ್ನ ಸತತ ಮೂರು ವರ್ಷ ಈ ಗೌರವಕ್ಕೆ ಪಾತ್ರರಾಗಿದ್ದರು.
ಮಹಿಳಾ ವಿಭಾಗದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲೈಸ್ ಪೆರಿ ವಿಸ್ಟನ್ ಫೈವ್ ಕ್ರಿಕೆಟರ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ಪುರುಷರ ತಂಡದ ವೇಗಿ ಜೋಫ್ರಾ ಆರ್ಚರ್, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಮಾರ್ನಸ್ ಲಾಬುಶೇನ್, ಎಸ್ಸೆಕ್ಸ್ ಆಫ್‌ಸ್ಪಿನ್ನರ್ ಸೈಮನ್ ಹಾರ್ಮರ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.