ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹಾರಾಜ ಟ್ರೋಫಿ ಕ್ರಿಕೆಟ್ ಟಿ20 ಟೂರ್ನಿ ಆರಂಭವಾಗಲು ಇನ್ನು ಆರು ದಿನಗಳು ಮಾತ್ರ ಬಾಕಿಯಿವೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಇನ್ನೂ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.
ಇದೇ 11ರಂದು ಟೂರ್ನಿ ಆರಂಭವಾಗಬೇಕು. ಫ್ರ್ಯಾಂಚೈಸಿಗಳು ಈಗಾಗಲೇ ತಂಡಗಳ ಅಭ್ಯಾಸ, ಪ್ರಚಾರ ಇತ್ಯಾದಿ ಚಟುವಟಿಕೆಗಳನ್ನು ಆರಂಭಿಸಿವೆ. ಬೆಂಗಳೂರಿನಲ್ಲಿ ಅನುಮತಿ ಸಿಗದಿದ್ದರೆ ಮೈಸೂರಿಗೆ ಸ್ಥಳಾಂತರ ಮಾಡುವ ಕುರಿತು ಕೂಡ ಕೆಎಸ್‌ಸಿಎಯಲ್ಲಿ ಚಿಂತನೆ ನಡೆದಿತ್ತು ಎನ್ನಲಾಗಿದೆ. ಆದರೆ ಈ ಬಗ್ಗೆಯೂ ಯಾವುದೇ ಖಚಿತ ನಿರ್ಧಾರ ಕೈಗೊಂಡಿಲ್ಲವೆಂದು ಮೂಲಗಳು ತಿಳಿಸಿವೆ.
‘ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಗಳಿಗೆ ಜನರ ಪ್ರವೇಶವನ್ನು ನಿರ್ಬಂಧಿಸುವ ನಿರ್ಧಾರವನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದ್ದರಿಂದ ಟೂರ್ನಿ ಆಯೋಜನೆಗೆ ಅವಕಾಶ ಮತ್ತು ಅನುಮತಿ ಸಿಗುವ ನಿರೀಕ್ಷೆ ಇದೆ’ ಎಂದು ಕೆಎಸ್‌ಸಿಎ ಉನ್ನತ ಮೂಲಗಳು ಹೇಳಿವೆ.
ಆದರೆ ಜೂನ್ ತಿಂಗಳಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಸಾವಿಗೀಡಾಗಿದ್ದರು. ಈ ಘಟನೆ ಬಳಿಕ ಬೆಂಗಳೂರಿನಲ್ಲಿ ಕ್ರಿಕೆಟ್ ಆಯೋಜನೆ, ದೊಡ್ಡ ಸಮಾರಂಭಗಳು, ರ್‍ಯಾಲಿಗಳಿಗೆ ಅನುಮತಿ ನೀಡಲು ನಗರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕ್ರಮ ತೆಗೆದುಕೊಂಡಿದ್ದಾರೆ. ಇದೇ ತಿಂಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಿರುವ ಮಹಾರಾಜ ಟ್ರೋಫಿ ಕ್ರಿಕೆಟ್ ಅನುಮತಿ ನೀಡುವಂತೆ ಆಯೋಜಕರು ನಗರ ಪೊಲೀಸ್ ಕಮಿಷನರ್ ಹಾಗೂ ಕೇಂದ್ರ ವಲಯದ ಡಿಸಿಪಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದಾರೆ. ಪೊಲೀಸರು ಇನ್ನೂ ಅನುಮತಿ ನೀಡಿಲ್ಲ.
‘ಆಯೋಜಕರಿಂದ ಮನವಿ ಬಂದಿದೆ. ಅದು ಇನ್ನೂ ಪರಿಶೀಲನಾ ಹಂತದಲ್ಲಿ ಇದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.