ADVERTISEMENT

‘ಬಯೊ ಸೆಕ್ಯೂರ್ ಪರಿಕಲ್ಪನೆ ಅವಾಸ್ತವಿಕ: ರಾಹುಲ್ ದ್ರಾವಿಡ್

ಪಿಟಿಐ
Published 26 ಮೇ 2020, 19:45 IST
Last Updated 26 ಮೇ 2020, 19:45 IST
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್   

ನವದೆಹಲಿ: ‘ಜೀವ ಸುರಕ್ಷಾ ವಾತಾವರಣ’ದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸುವ ಪರಿಕಲ್ಪನೆಯು ಅವಾಸ್ತವಿಕ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ವಿಶ್ವದ ಕೆಲವು ಕ್ರಿಕೆಟ್ ಸಂಸ್ಥೆಗಳು ಚಟುವಟಿಕೆಗಳನ್ನು ಆರಂಭಿಸಲು ಮುಂದಾಗಿವೆ. ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಎದುರಿನ ಸರಣಿಗಳನ್ನು ಜೀವ ಸುರಕ್ಷಾ (ಬಯೋ ಸೆಕ್ಯೂರ್) ವಾತಾವರಣವಿರುವ ತಾಣಗಳಲ್ಲಿ ಆಯೋಜಿಸುವುದಾಗಿ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆಯು ಈಚೆಗೆ ಹೇಳಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ದ್ರಾವಿಡ್, ‘ಇಸಿಬಿಯು ಹೇಳಿರುವುದು ಕೊಂಚ ಅಸಹಜವೆನಿಸುತ್ತದೆ. ಅವರು ಈ ಸರಣಿಗಳನ್ನು ನಡೆಸಲು ಉತ್ಸುಕರಾಗಿದ್ದಾರೆನ್ನುವುದು ಕೂಡ ನಿಜ. ಏಕೆಂದರೆ ಅವರಿಗೆ ಬೇರೆ ಮಹತ್ವದ ಸರಣಿಗಳು ಇಲ್ಲ’ ಎಂದಿದ್ದಾರೆ.

ADVERTISEMENT

‘ಸದ್ಯ ಇರುವ ವೇಳಾಪಟ್ಟಿಯಲ್ಲಿ ಎಲ್ಲರಿಗೂ ಇಸಿಬಿ ಸಲಹೆಯನ್ನು ಪಾಲಿಸುವುದು ಸಾಧ್ಯವಾಗುವುದಿಲ್ಲ. ಒಂದು ಟೆಸ್ಟ್ ಪಂದ್ಯಕ್ಕೂ ಮುನ್ನ ಎಲ್ಲರನ್ನೂ ಪರೀಕ್ಷೆ ಮಾಡಿ ಕಣಕ್ಕಿಳಿಸಲಾಗುತ್ತದೆ. ಆದರೆ, ಒಂದೊಮ್ಮೆ ಪಂದ್ಯದ ಎರಡೋ ಅಥವಾ ಮೂರನೇ ದಿನ ಯಾವುದಾದರೂ ಒಬ್ಬ ಆಟಗಾರನಿಗೆ ಸೋಂಕು ದೃಢಪಟ್ಟಾಗ ಏನು ಮಾಡಬೇಕು? ಸದ್ಯದ ಆರೋಗ್ಯ ಇಲಾಖೆಯ ನಿಯಮದಂತೆ ಆ ಸೋಂಕಿತನ ಸಂಪರ್ಕದಲ್ಲಿರುವವರೆಲ್ಲರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕಾಗುತ್ತದೆ. ಇದರರ್ಥ ಆ ಟೆಸ್ಟ್ ಪಂದ್ಯವು ಅರ್ಧಕ್ಕೆ ಸ್ಥಗಿತವಾಗುತ್ತದೆ. ಅಷ್ಟೇ ಏಕೆ, ಇಡೀ ಸರಣಿಯೇ ರದ್ದಾಗಬಹುದು. ಜೊತೆಗೆ ಅದಕ್ಕಾಗಿ ಮಾಡಿದ ಅಪಾರ ವೆಚ್ಚವು ನೀರಿನಲ್ಲಿ ಕೊಚ್ಚಿಹೋದಂತಾಗುತ್ತದೆ’ ಎಂದು ವಿಶ್ಲೇಷಿಸಿದರು.

‘ಪ್ರೇಕ್ಷಕರಿಂದ ಕಿಕ್ಕಿರಿದ ಕ್ರೀಡಾಂಗಣದಲ್ಲಿ ಆಡುವುದನ್ನು ಎಲ್ಲ ಆಟಗಾರರೂ ಪ್ರೀತಿಸುತ್ತಾರೆ. ಪ್ರೇಕ್ಷಕರು ಮತ್ತು ಆಟ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಜನರಿಲ್ಲದ ಕ್ರೀಡಾಂಗಣದ ನಿಸಾರವಾದ ವಾತಾವರಣದ ಕೊರಗು ಆಟಗಾರರನ್ನು ಕಾಡುವುದು ಖಚಿತ. ಇದರಿಂದ ಅವರಿಗೆ ಆತ್ಮತೃಪ್ತಿ ಎಂಬುದಿರುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕೊರೊನಾ ವೈರಸ್‌ ತಡೆಯಲು ಮತ್ತು ಚಿಕಿತ್ಸೆಗೆ ಸೂಕ್ತ ಔಷಧಿಯು ಸಿಗುವ ನಿರೀಕ್ಷೆ ಇದೆ. ಆಗ ಮಾತ್ರ ನಾವೆಲ್ಲರೂ ಮತ್ತೆ ಮೊದಲಿನ ಲಯಕ್ಕೆ ಮರಳಬಹುದು’ ಎಂದು ‘ಸಪೋರ್ಟ್ ಯುವ’ ವೆಬಿನಾರ್‌ನಲ್ಲಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.