ADVERTISEMENT

ಅಂಧ ಮಹಿಳೆಯರ ರಾಷ್ಟ್ರೀಯ ಟಿ-20: ಒಡಿಶಾ ಚಾಂಪಿಯನ್, ಕರ್ನಾಟಕ ರನ್ನರ್ಸ್ ಅಪ್‍

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 13:49 IST
Last Updated 12 ಜನವರಿ 2024, 13:49 IST
<div class="paragraphs"><p>ಹುಬ್ಬಳ್ಳಿಯ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ಶುಕ್ರವಾರ ನಡೆದ ಅಂಧ ಮಹಿಳೆಯರ ರಾಷ್ಟ್ರೀಯ ಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಒಡಿಶಾ ತಂಡದ ಆಟಗಾರ್ತಿಯರು ಟ್ರೋಫಿ ಮುತ್ತಿಟ್ಟು ಸಂಭ್ರಮಿಸಿದರು&nbsp; </p></div>

ಹುಬ್ಬಳ್ಳಿಯ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ಶುಕ್ರವಾರ ನಡೆದ ಅಂಧ ಮಹಿಳೆಯರ ರಾಷ್ಟ್ರೀಯ ಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಒಡಿಶಾ ತಂಡದ ಆಟಗಾರ್ತಿಯರು ಟ್ರೋಫಿ ಮುತ್ತಿಟ್ಟು ಸಂಭ್ರಮಿಸಿದರು 

   

-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ಹುಬ್ಬಳ್ಳಿ: ಒಡಿಶಾ ತಂಡವು ಇಲ್ಲಿನ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ನಡೆದ ಇಂಡಸ್‌ಇಂಡ್ ಬ್ಯಾಂಕ್ ಅಂಧ ಮಹಿಳೆಯರ ರಾಷ್ಟ್ರೀಯ ಟಿ-20 ಕ್ರಿಕೆಟ್‍ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ADVERTISEMENT

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಒಡಿಶಾ ತಂಡ ಕಳೆದ ಬಾರಿಯೂ ಚಾಂಪಿಯನ್ ಆಗಿತ್ತು.

ಟಾಸ್ ಗೆದ್ದ ಒಡಿಶಾ ತಂಡ ಆತಿಥೇಯ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಕರ್ನಾಟಕ ತಂಡವು 18.3 ಓವರ್‌ಗಳಲ್ಲಿ  93 ರನ್‌ಗಳಿಗೆ ಆಲ್‍ಔಟ್‍ ಆಯಿತು. ಒಡಿಶಾ ತಂಡವು 13.1 ಓವರ್‌ಗಳಲ್ಲಿ 94 ರನ್ ಗಳಿಸಿ ಗೆಲುವಿನ ನಗೆ ಬೀರಿತು. 

ಅಲ್ಪ ಗುರಿ ಬೆನ್ನತ್ತಿದ ಒಡಿಶಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್‌ಗಳಾದ ಫುಲಾ ಸರೆನ್ (0),  ರಚನಾ ಜೇನಾ (9) ಬೇಗ ವಿಕೆಟ್ ಒಪ್ಪಿಸಿದರು. ಅಜೇಯ ಆಟವಾಡಿದ ಬಸಂತಿ ಹನ್ಸ್ ದಾ 34 (25ಎ, 4X2) ಮತ್ತು ಜಮುನಾ ರಾಣಿ ಟುಡು 24 (23ಎ) ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಇದಕ್ಕೂ ಮುನ್ನ ಕರ್ನಾಟಕ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ರೇಣುಕಾ ರಜಪೂತ (17), ದೀಪಿಕಾ ಟಿ.ಸಿ (16), ದಿವಕ್ಕ( 12), ವರ್ಷಾ ಯು( 10) ಮಾತ್ರ ಎರಂಡಕಿ ಮೊತ್ತ ಗಳಿಸಿದರು. ಒಡಿಶಾ ತಂಡದ ಆಟಗಾರರು ಚುರುಕಿನ ಕ್ಷೇತ್ರರಕ್ಷಣೆ ಮೂಲಕ ಗಮನ ಸೆಳೆದರು.

ಝಿಲಿ ಬಿರುವ –ಪಂದ್ಯಶ್ರೇಷ್ಠ, ಬಿ1 ವರ್ಗದಲ್ಲಿ ಸಿಮು ದಾಸ್‌-ರಾಜಸ್ಥಾನ (ಸಂಪೂರ್ಣ ಅಂಧತ್ವ) , ಬಿ2 ವರ್ಗದಲ್ಲಿ ಮೇನಕಾ ಕುಮಾರಿ-ದೆಹಲಿ (3 ಮೀಟರ್‌ವರೆಗೆ ದೃಷ್ಟಿ), ಬಿ3 ವರ್ಗದಲ್ಲಿ ಝಿಲಿ ಬಿರುವ–ಒಡಿಶಾ (6 ಮೀಟರ್‌ವರೆಗೆ ದೃಷ್ಟಿ)–ಸರಣಿಶ್ರೇಷ್ಠ ಪ್ರಶಸ್ತಿಗೆ (₹10,000 ನಗದು ಬಹುಮಾನ) ಭಾಜನರಾದರು. 

ಒಡಿಶಾ ತಂಡಕ್ಕೆ ಟ್ರೋಫಿ ಹಾಗೂ ₹1,04,000 ನಗದು ಬಹುಮಾನ, ರನ್ನರ್ಸ್‌ ಅಪ್‌ ಕರ್ನಾಟಕ ತಂಡಕ್ಕೆ ಟ್ರೋಫಿ ಮತ್ತು ₹80,000 ನಗದು ಬಹುಮಾನ ನೀಡಲಾಯಿತು.

ಕರ್ನಾಟಕ ತಂಡವು ಸೆಮಿಫೈನಲ್‌ನಲ್ಲಿ ದೆಹಲಿ ತಂಡವನ್ನು 7ವಿಕೆಟ್‌ಗಳಿಂದ ಮಣಿಸಿತ್ತು. ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ), ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ (ಸಿಎಬಿಐ), ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸಬಲ್ಡ್ ಸಹಯೋಗದಲ್ಲಿ ಟೂರ್ನಿ ಆಯೋಜಿಸಲಾಗಿತ್ತು. ವಿವಿಧ ರಾಜ್ಯಗಳ 16 ತಂಡಗಳು ಪಾಲ್ಗೊಂಡಿದ್ದವು.

ಸಂಕ್ಷಿಪ್ತ ಸ್ಕೋರು:

ಕರ್ನಾಟಕ: 18.3 ಓವರ್‌ಗಳಲ್ಲಿ 93 (ರೇಣುಕಾ ರಜಪೂತ 17, ದೀಪಿಕಾ ಟಿ.ಸಿ 16, ದಿವಕ್ಕ 12, ಜಮುನಾ ರಾಣಿ ಟುಡು 19ಕ್ಕೆ 2).

ಒಡಿಶಾ: 13.1 ಓವರ್‌ಗಳಲ್ಲಿ 4 ವಿಕೆಟ್‌ಗೆ 94 (ಬಸಂತಿ ಹನ್ಸ್ ದಾ 34, ಜಮುನಾ ರಾಣಿ ಟುಡು 24, ಪದ್ಮಿನಿ ಟುಡು 14, ಸುನಿತಾ ಧೋಂಡಪ್ಪನವರ 15 ಕ್ಕೆ 1).

ಹುಬ್ಬಳ್ಳಿಯ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ಶುಕ್ರವಾರ ನಡೆದ ಅಂಧ ಮಹಿಳೆಯರ ರಾಷ್ಟ್ರೀಯ ಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆದ ಕರ್ನಾಟಕ ತಂಡದ ಆಟಗಾರ್ತಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.