ADVERTISEMENT

ಮೊದಲ ಟೆಸ್ಟ್‌: ಬೂಮ್ರಾ ದಾಳಿಗೆ ವೆಸ್ಟ್‌ ಇಂಡೀಸ್‌ ಧ್ವಂಸ

ಭಾರತಕ್ಕೆ 318 ರನ್‌ಗಳ ಭರ್ಜರಿ ಜಯ

ಪಿಟಿಐ
Published 26 ಆಗಸ್ಟ್ 2019, 20:38 IST
Last Updated 26 ಆಗಸ್ಟ್ 2019, 20:38 IST
ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ವಿಕೆಟ್‌ ಉರುಳಿಸಿದ ಭಾರತದ ಜಸ್‌ಪ್ರೀತ್ ಬೂಮ್ರಾ ಅವರನ್ನು ಅಭಿನಂದಿಸಿದ ಸಹ ಆಟಗಾರರು– ಎಪಿ/ಪಿಟಿಐ ಚಿತ್ರ
ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ವಿಕೆಟ್‌ ಉರುಳಿಸಿದ ಭಾರತದ ಜಸ್‌ಪ್ರೀತ್ ಬೂಮ್ರಾ ಅವರನ್ನು ಅಭಿನಂದಿಸಿದ ಸಹ ಆಟಗಾರರು– ಎಪಿ/ಪಿಟಿಐ ಚಿತ್ರ   

ನಾರ್ತ್‌ ಸೌಂಡ್‌. ಆ್ಯಂಟಿಗಾ: ಜಸ್‌ಪ್ರೀತ್‌ ಬೂಮ್ರಾ (8–4–7–5) ಅವರ ವೇಗದ ದಾಳಿಗೆ ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ಧ್ವಂಸಗೊಂಡಿತು. ಭಾರತ ಭಾನುವಾರ ಮೊದಲ ಟೆಸ್ಟ್ ಪಂದ್ಯವನ್ನು ನಾಲ್ಕು ದಿನಗಳ ಒಳಗೆ 318 ರನ್‌ಗಳ ದೊಡ್ಡ ಅಂತರದಲ್ಲಿ ಗೆದ್ದುಕೊಂಡಿತು.

ಅಜಿಂಕ್ಯ ರಹಾನೆ ದೀರ್ಘ ಅವಧಿಯ ನಂತರ ಶತಕ ಬಾರಿಸಿ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟ ಬಳಿಕ ಬೂಮ್ರಾ ನಿರೀಕ್ಷೆಗಿಂತ ಬೇಗನೇ ಮಾರಕ ದಾಳಿ ನಡೆಸಿ ಆತಿಥೇಯರ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಅವರಿಗೆ ಇಶಾಂತ್‌ ಶರ್ಮಾ (31ಕ್ಕೆ3) ಉತ್ತಮ ಬೆಂಬಲ ನೀಡಿದರು. ಈ ಗೆಲುವಿನ ಮೂಲಕ ಭಾರತ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು. ವಿರಾಟ್‌ ಕೊಹ್ಲಿ ಬಳಗ 60 ಪಾಯಿಂಟ್‌ಗಳನ್ನೂ ಗಳಿಸಿತು.

ಗೆಲುವಿಗೆ 419 ರನ್‌ಗಳ ದೊಡ್ಡ ಗುರಿ ಬೆನ್ನಟ್ಟಿದ ವೆಸ್ಟ್‌ ಇಂಡೀಸ್‌ 27ನೇ ಓವರಿನಲ್ಲಿ ಸರಿಯಾಗಿ 100 ರನ್‌ಗಳಿಗೆ ಪತನಗೊಂಡಿತು. ಭಾರತ ಹೊರದೇಶದಲ್ಲಿ ಇಷ್ಟೊಂದು ರನ್‌ಗಳ ಅಂತರದಿಂದ ಜಯಗಳಿಸಿದ್ದು ಇದೇ ಮೊದಲು. ರನ್‌ ಆಧಾರದಲ್ಲಿ ಭಾರತದ ದೊಡ್ಡ ಗೆಲುವು ದಕ್ಷಿಣ ಆಫ್ರಿಕ ವಿರುದ್ಧ (ದೆಹಲಿ, 2015–16ರಲ್ಲಿ, 336 ರನ್‌ ಅಂತರ) ದಾಖಲಾಗಿತ್ತು.

ADVERTISEMENT

ಇದಕ್ಕೆ ಮೊದಲು,ಭಾರತ (ಶನಿವಾರ: 3 ವಿಕೆಟ್‌ಗೆ 185) ತನ್ನ ಎರಡನೇ ಇನಿಂಗ್ಸ್‌ಅನ್ನು 7 ವಿಕೆಟ್‌ಗೆ 343 ರನ್‌ಗಳಾಗಿದ್ದಾಗ ಡಿಕ್ಲೇರ್‌ ಮಾಡಿಕೊಂಡಿತ್ತು. ಉಪ ನಾಯಕ ಅಜಿಂಕ್ಯ ರಹಾನೆ ಎರಡು ವರ್ಷಗಳ ಅಂತರದ ನಂತರ ಶತಕ ಗಳಿಸಿದರು. ರಹಾನೆ 2017ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಶತಕ ಗಳಿಸಿದ್ದರು.

ಹನುಮ ವಿಹಾರಿ (93 ರನ್‌, 128 ಎಸೆತ) ಜೊತೆ ರಹಾನೆ ಐದನೇ ವಿಕೆಟ್‌ಗೆ 125 ರನ್‌ ಜೊತೆಯಾಟವಾಡಿದರು.ವಿಹಾರಿ ಬರೇ ಏಳು ರನ್‌ಗಳಿಂದ ಚೊಚ್ಚಲ ಟೆಸ್ಟ್‌ ಶತಕ ತಪ್ಪಿಸಿಕೊಂಡರು. ಅವರ ನಿರ್ಗಮನದ ತಕ್ಷಣ ಭಾರತ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಬೌಲಿಂಗ್‌ಗೆ ಹಿತಕರವಾಗಿದ್ದ ವಾತಾವರಣದಲ್ಲಿ ಬೂಮ್ರಾ ಮಿಂಚಿದರು. ಆಫ್‌ಸ್ಟಂಪ್‌ಅನ್ನೇ ಗುರಿಯಾಗಿಟ್ಟುಕೊಂಡು ಉರಿ ದಾಳಿ ನಡೆಸಿದ ಅವರು ನಾಲ್ವರನ್ನು ‘ಬೌಲ್ಡ್‌’ ಆಗಿಯೇ ಬಲಿ ಪಡೆದರು. ಬ್ರಾತ್‌ವೇಟ್‌, ಬೂಮ್ರಾ ಅವರ ಮೊದಲ ಓವರ್‌ನಲ್ಲೇ ಔಟ್‌ ಸ್ವಿಂಗರ್‌ ಎಸೆತ ಕೆಣಕಲು ಹೋಗಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡುವ ಮೂಲಕ ಆತಿಥೇಯ ಆಟಗಾರರ ಪೆವಿಲಿಯನ್‌ ಪರೇಡ್‌ ಆರಂಭವಾಯಿತು. ಅವರ ಎರಡನೇ ಓವರ್‌ನಲ್ಲಿ ಇನ್‌ಸ್ವಿಂಗರ್‌ಗೆ ಕ್ಯಾಂಪ್‌ಬೆಲ್‌ ನಿರುತ್ತರರಾದರು.

ಒಂದು ಹಂತದಲ್ಲಿ 50 ರನ್‌ಗಳಾಗುವಷ್ಟರಲ್ಲಿ ಎಂಟು ವಿಕೆಟ್‌ಗಳು ಬಿದ್ದಿದ್ದರಿಂದ ವೆಸ್ಟ್‌ ಇಂಡೀಸ್‌ 60ರ ಗಡಿ ದಾಟುವುದೂ ಅನುಮಾನವಾಗಿತ್ತು. ಕೇಮಾರ್‌ ರೋಚ್‌ (38) ಮತ್ತು ಮಿಗೆಲ್‌ ಕಮಿನ್ಸ್‌ (ಔಟಾಗದೇ 19) ಅವರಿಂದಾಗಿ ವೆಸ್ಟ್‌ ಇಂಡೀಸ್‌ ನೂರರ ಮೊತ್ತ ಗಳಿಸಲು ಮತ್ತು ಸೋಲನ್ನು ಸ್ವಲ್ಪ ವಿಳಂಬಗೊಳಿಸಲು ಸಾಧ್ಯವಾಯಿತು. ಇವರಿಬ್ಬರನ್ನು ಬಿಟ್ಟರೆ ಎರಡಂಕಿ ಮೊತ್ತ ದಾಟಿದವರು ರೋಸ್ಟನ್‌ ಚೇಸ್‌ (12) ಮಾತ್ರ.

ನಾಯಕನಾಗಿ ವಿರಾಟ್‌ ಕೊಹ್ಲಿ ಅವರಿಗೆ ಇದು 27ನೇ ಜಯ. ಅವರು ಮಹೇಂದ್ರ ಸಿಂಗ್ ಧೋನಿ ಜೊತೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. ದೇಶದಿಂದ ಹೊರಗೆ ಅತಿ ಹೆಚ್ಚು ಟೆಸ್ಟ್‌ ಜಯ ಸಾಧಿಸಿದ ಸೌರವ್ ಗಂಗೂಲಿ ಅವರನ್ನೂ ಕೊಹ್ಲಿ 12ನೇ ಗೆಲುವಿನೊಡನೆ ಹಿಂದೆ ಹಾಕಿದ್ದಾರೆ.

ಬೂಮ್ರಾ ದಾಖಲೆ
ಮೊದಲ ಸ್ಪೆಲ್‌ನಲ್ಲೇ ವೆಸ್ಟ್‌ ಇಂಡೀಸ್‌ಗೆ ಬಲವಾದ ಪೆಟ್ಟು ನೀಡಿದ ಬೂಮ್ರಾ ಐದು ವಿಕೆಟ್‌ ಪಡೆಯುವ ನೂತನ ದಾಖಲೆ ಬರೆದರು.

ಕೇವಲ 11ನೇ ಟೆಸ್ಟ್‌ ಆಡಿದ ಬೂಮ್ರಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ಐದು ವಿಕೆಟ್‌ ಪಡೆದ ಏಷ್ಯದ ಮೊದಲ ಬೌಲರ್‌ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.