ADVERTISEMENT

ಸ್ಮಿತ್‌, ಡಿವಿಲಿಯರ್ಸ್‌ಗೆ ಬೌಲ್‌ ಮಾಡುವುದು ಅತಿ ದೊಡ್ಡ ಸವಾಲು ಎಂದ ಕುಲದೀಪ್‌

ಪಿಟಿಐ
Published 3 ಜುಲೈ 2020, 11:40 IST
Last Updated 3 ಜುಲೈ 2020, 11:40 IST
ಕುಲದೀಪ್‌ ಯಾದವ್‌–ಪಿಟಿಐ ಚಿತ್ರ
ಕುಲದೀಪ್‌ ಯಾದವ್‌–ಪಿಟಿಐ ಚಿತ್ರ   

ನವದೆಹಲಿ: ‘ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಅವರ ಎದುರು ಬೌಲಿಂಗ್‌ ಮಾಡುವುದು ಅತ್ಯಂತ ಸವಾಲಿನ ಕೆಲಸ’ ಎಂದು ಭಾರತ ಕ್ರಿಕೆಟ್‌ ತಂಡದ ಲೆಗ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಲ್ಲಿ ಒಂದು ವಿಶಿಷ್ಟವಾದ ಸಾಮರ್ಥ್ಯವಿದೆ ಎಂಬುದು ಕುಲದೀಪ್‌ ಅವರ ಅಭಿಮತ.

‘ಸ್ಮಿತ್‌ ಅವರು ನನ್ನ ಎಸೆತಗಳಿಗೆ ಬ್ಯಾಕ್‌ಫೂಟ್‌ ಬ್ಯಾಟಿಂಗ್‌ ಮೂಲಕ ಉತ್ತರಿಸುತ್ತಾರೆ. ತಡವಾಗಿ ಬ್ಯಾಟ್‌ ಬೀಸುತ್ತಾರೆ. ಹೀಗಾಗಿ ಅವರಿಗೆ ಬೌಲಿಂಗ್‌ ಮಾಡುವುದು ಸವಾಲಾಗಿ ಪರಿಣಮಿಸಿದೆ’ ಎಂದು ಕುಲದೀಪ್‌ ಅವರು ಇಎಸ್‌ಪಿಎನ್ ‌ಕ್ರಿಕ್‌ಇನ್ಫೊ ವಾಹಿನಿಯಲ್ಲಿ ನಡೆದ ಕ್ರಿಕೆಟ್‌ಬಾಜಿ ಕಾರ್ಯಕ್ರಮದಲ್ಲಿಹಿರಿಯ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ಅವರೊಂದಿಗೆ ಮಾತನಾಡಿದ್ದಾರೆ.

ADVERTISEMENT

‘ಏಕದಿನ ಮಾದರಿಯಲ್ಲಿ ಡಿವಿಲಿಯರ್ಸ್‌ ಉತ್ತಮ ಆಟಗಾರ. ಅವರಲ್ಲೊಂದು ವಿಶಿಷ್ಟ ಶೈಲಿಯಿದೆ. ಈಗ ಅವರು ವಿದಾಯ ಹೇಳಿದ್ದಾರೆ. ಇದು ಸಂತಸದ ಸಂಗತಿ! ನನ್ನ ಬೌಲಿಂಗ್‌ನಲ್ಗಿ ಅವರಷ್ಟು ರನ್‌ ಹೊಡೆಯುವ ಇತರ ಬ್ಯಾಟ್ಸ್‌ಮನ್‌ನನ್ನು ಕಂಡಿಲ್ಲ’ ಎಂದು ಕುಲದೀಪ್‌ ನುಡಿದರು.

ಹೋದ ವರ್ಷದ ತಮ್ಮ ಕಳಪೆ ಫಾರ್ಮ್‌ ಕುರಿತು ಮಾತನಾಡಿದ ಅವರು, ಇದಕ್ಕೆ ಕೆಲವು ಕೌಶಲಗಳ ಕೊರತೆ ಕಾರಣವೆಂದರು.

‘2019ರ ವಿಶ್ವಕಪ್‌ಗೆ ತೆರಳುವ ಮುಂಚೆ ನಾನು ಹೆಚ್ಚಿನ ತಯಾರಿ ನಡೆಸಿದ್ದೆ. ಏಕೆಂದರೆ ಆ ವರ್ಷದ ಐಪಿಎಲ್‌ನಲ್ಲಿ ಅನುಭವಿಸಿದ ವೈಫಲ್ಯಗಳಿಂದ ಹೊರಬರಬೇಕು ಎಂದುಕೊಂಡಿದ್ದೆ. ಹೆಚ್ಚು ವಿಕೆಟ್‌ ಗಳಿಸದಿದ್ದರೂ ವಿಶ್ವಕಪ್‌ನಲ್ಲಿ ಚೆನ್ನಾಗಿಯೇ ಬೌಲ್‌ ಮಾಡಿದೆ ಎಂಬುದು ನನ್ನ ಅನಿಸಿಕೆ. ಬಳಿಕ ತಂಡದಲ್ಲಿ ನನ್ನ ಸ್ಥಾನ ಸ್ಥಿರವಾಗಿರಲಿಲ್ಲ. ಕೆಲವು ಕೌಶಲಗಳು ನನ್ನಲ್ಲಿ ಇಲ್ಲದಿರುವುದೂ ಕಳಪೆ ಆಟಕ್ಕೆ ಕಾರಣವಾಯಿತು’ ಎಂದು ಚೈನಾಮನ್‌ ಬೌಲರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.