ದುಬೈ : ಭಾರತ ಕ್ರಿಕೆಟ್ ತಂಡದ ಶರವೇಗದ ಸರದಾರ ಜಸ್‌ಪ್ರೀತ್ ಬೂಮ್ರಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಸರ್ ಗ್ಯಾರ್‌ಫೀಲ್ಡ್ ಸೋಬರ್ಸ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
2024ರಲ್ಲಿ ‘ಕೌಶಲದಲ್ಲಿ ಶ್ರೇಷ್ಠತೆ, ನಿಖರತೆ ಮತ್ತು ನಿರಂತರ ಸಾಮರ್ಥ್ಯ ಪ್ರದರ್ಶನ’ವನ್ನು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿಯೂ ತೋರಿದ ಆಟಗಾರ ಬೂಮ್ರಾ.
‘ಜಸ್‌ಪ್ರೀತ್ ಬೂಮ್ರಾ ಅವರು 2024ರಲ್ಲಿ ಅತ್ಯಮೋಘ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಪ್ರತಿಷ್ಠಿತ ಸರ್ ಗ್ಯಾರ್‌ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವರ್ಷದ ಶ್ರೇಷ್ಠ ಕ್ರಿಕೆಟಿಗ ಗೌರವವನ್ನು ಅವರಿಗೆ ಐಸಿಸಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಗುವುದು. ಅವರು ದೀರ್ಘ ಮತ್ತು ಚುಟುಕು ಕ್ರಿಕೆಟ್ ಮಾದರಿಗಳಲ್ಲಿ ತಮ್ಮ ಎದುರಾಳಿಗಳ ಮುಂದೆ ಪಾರಮ್ಯ ಮೆರೆದಿದ್ದಾರೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ಶ್ಲಾಘಿಸಿದೆ.
ಬೂಮ್ರಾ ಅವರು ಈ ಸಾಧನೆ ಮಾಡಿದ ಭಾರತದ ಐದನೇ ಆಟಗಾರನಾಗಿದ್ದಾರೆ. ಈ ಮೊದಲು ರಾಹುಲ್ ದ್ರಾವಿಡ್ (2004), ಸಚಿನ್ ತೆಂಡೂಲ್ಕರ್ (2010), ಆರ್. ಅಶ್ವಿನ್ (2016) ಮತ್ತು ವಿರಾಟ್ ಕೊಹ್ಲಿ (2017, 2018) ಅವರಿಗೆ ಈ ಪ್ರಶಸ್ತಿ ಒಲಿದಿತ್ತು.
‘ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಬೂಮ್ರಾ ಅವರು ದಾಖಲೆಯ 907 ಅಂಕಗಳನ್ನು ಗಳಿಸಿದ್ದಾರೆ. ಈ ಐತಿಹಾಸಿಕ ಸಾಧನೆ ಮಾಡಿದ ಭಾರತದ ಏಕೈಕ ಬೌಲರ್ ಅವರಾಗಿದ್ದಾರೆ’ ಎಂದು ಐಸಿಸಿ ಬಣ್ಣಿಸಿದೆ.
‘ವಿಶ್ವದ ಸರ್ವಶ್ರೇಷ್ಠ ವೇಗದ ಬೌಲರ್ ಆಗಿ ಅವರು ಈ ವರ್ಷ ಗುರುತಿಸಿಕೊಂಡಿದ್ದಾರೆ’ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಹೋದ ವರ್ಷ ಭಾರತ ತಂಡವು ಟಿ20 ವಿಶ್ವಕಪ್ ಜಯಿಸಲು ಅವರ ಅಮೋಘ ಬೌಲಿಂಗ್ ಬಹಳಷ್ಟು ಕಾರಣವಾಗಿತ್ತು. ಅವರು ಆ ಟೂರ್ನಿಯಲ್ಲಿ 15 ವಿಕೆಟ್ ಗಳಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಅತಿ ವೇಗವಾಗಿ ಗಳಿಸಿದ ಸಾಧನೆಯನ್ನೂ ಮಾಡಿದ್ದಾರೆ.
ಬೂಮ್ರಾ ಅವರು ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 71 ವಿಕೆಟ್‌ಗಳನ್ನು 13 ಪಂದ್ಯಗಳಿಂದ ಗಳಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್ ಅವರಾಗಿದ್ದಾರೆ. ಕಪಿಲ್ ದೇವ್ ಅವರು 1983ರಲ್ಲಿ 100 ವಿಕೆಟ್ ಗಳಿಸಿದ್ದರು.
ಬೂಮ್ರಾ ಅವರು ಈಚೆಗೆ ನಡೆದ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಐದು ಪಂದ್ಯಗಳಿಂದ 32 ವಿಕೆಟ್‌ಗಳನ್ನು ಗಳಿಸಿದ್ದರು.
‘ಈ ಪ್ರಶಸ್ತಿ ಗಳಿಸಿರುವುದು ನನ್ನ ಪಾಲಿಗೆ ಬಹಳ ಹೆಮ್ಮೆಯ ವಿಷಯ. ಬಾಲ್ಯದಲ್ಲಿ ನನ್ನ ನೆಚ್ಚಿನ ಕ್ರಿಕೆಟ್ ತಾರೆಗಳು ಈ ಪ್ರತಿಷ್ಠಿತ ಪ್ರಶಸ್ತಿ ಜಯಿಸುವುದನ್ನು ನೋಡುತ್ತಿದ್ದೆ. ಈಗ ನಾನು ಅದನ್ನು ಸ್ವೀಕರಿಸುತ್ತಿರುವುದು ಬಹಳ ಸಂತಸದ ಸಂಗತಿ’ ಎಂದು ಜಸ್‌ಪ್ರೀತ್ ಬೂಮ್ರಾ ಹೇಳಿದ್ದಾರೆ.
‘ಟಿ20 ವಿಶ್ವಕಪ್ ಜಯಿಸಿದ್ದು ನನಗೆ ಅವಿಸ್ಮರಣೀಯ ಸಂಗತಿಯಾಗಿದೆ. ಆದ್ದರಿಂದ ವರ್ಷದ ಸಾಧನೆಗಳಲ್ಲಿ ನಾನು ಮೊದಲಿಗೆ ಆಯ್ಕೆ ಮಾಡಿಕೊಳ್ಳುವುದು ಈ ವಿಶ್ವಕಪ್ ಸಾಧನೆಯನ್ನೇ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಈ ಪ್ರಶಸ್ತಿಯನ್ನು ನಾನು ಬಹಳ ಸಂತೋಷ ಹಾಗೂ ಗೌರವದಿಂದ ಸ್ವೀಕರಿಸುವೆ. ಆದರೆ ನನ್ನ ಕಾಲುಗಳ ನೆಲದ ಮೇಲೆ ಇರುವಂತೆ ನೋಡಿಕೊಳ್ಳುವೆ. ಮತ್ತಷ್ಟು ಸಾಧನೆಯತ್ತ ಪ್ರಯತ್ನಿಸುವೆ’ ಎಂದು ನುಡಿದರು.
ದುಬೈ: 2023ರಲ್ಲಿ ತೋರಿದ ಅಮೋಘ ಆಟಕ್ಕಾಗಿ ನ್ಯೂಜಿಲೆಂಡ್‌ನ ಆಲ್‌ರೌಂಡರ್ ಅಮೇಲಿಯಾ ಕೆರ್ ಅವರು ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಗೌರವಕ್ಕೆ ನೀಡಲಾಗುವ ಹೇಹೊ ಫ್ಲಿಂಟ್ ಟ್ರೋಫಿ ಗೆದ್ದುಕೊಂಡ ನ್ಯೂಜಿಲೆಂಡ್‌ನ ಮೊದಲ ಆಟಗಾರ್ತಿ ಎನಿಸಿದ್ದಾರೆ.
ಲಾರಾ ವೋಲ್ವಾರ್ಟ್, ಚಮಾರಿ ಅಟಪಟ್ಟು ಮತ್ತು ಅನ್ನಾಬೆಲ್ ಸದರ್‌ಲ್ಯಾಂಡ್ ಅವರ ಪೈಪೋಟಿಯನ್ನು ಎದುರಿಸಿದ 24 ವರ್ಷ ವಯಸ್ಸಿನ ಮೆಲೀ ಕೆರ್ ಈ ಗೌರವಕ್ಕೆ ಪಾತ್ರ ರಾಗಿದ್ದಾರೆ.
ಸ್ಪೋಟಕ ಇನಿಂಗ್ಸ್ ಆಡುವ ಕೆರ್, ಉಪಯುಕ್ತ ಲೆಗ್ ಸ್ಪಿನ್ನರ್ ಆಗಿದ್ದಾರೆ. 2017ರಲ್ಲಿ ರಚೆಲ್ ಹೇಹೊ ಫ್ಲಿಂಟ್ ಟ್ರೋಫಿಯನ್ನು ಈ ಹಿಂದೆ ಮೂವರಷ್ಟೇ ಪಡೆದಿದ್ದಾರೆ. ಆಸ್ಟ್ರೇಲಿಯಾದ ಎಲಿಸ್ ಪೆರಿ, ಭಾರತದ ಸ್ಮೃತಿ ಮಂದಾನ ಮತ್ತು ಇಂಗ್ಲೆಂಡ್‌ನ ನಾಟ್ ಶಿವರ್ ಬ್ರಂಟ್ ಆ ಮೂವರು. ಮೂರೂ ಮಂದಿ ತಲಾ ಎರಡು ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.