ಜಸ್‌ಪ್ರೀತ್ ಬೂಮ್ರಾ
(ರಾಯಿಟರ್ಸ್ ಚಿತ್ರ)
ಲಂಡನ್: ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ನಡುವಣ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಗುರುವಾರದಿಂದ (ಜುಲೈ 31) ಆರಂಭವಾಗಲಿದೆ.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2ರ ಅಂತರದ ಹಿನ್ನಡೆಯಲ್ಲಿರುವ ಭಾರತ ತಂಡವು ಸರಣಿಯಲ್ಲಿ ಸಮಬಲ ಸಾಧಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೊಳಗಾಗಿದೆ.
ಹಾಗಿರುವಾಗ ವಿಶ್ವದ ನಂ.1 ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಆಡುವುದು ಅನುಮಾನವೆನಿಸಿದ್ದು, ಭೀತಿಗೆ ಕಾರಣವಾಗಿದೆ.
31 ವರ್ಷದ ಬೂಮ್ರಾ ನಾಲ್ಕನೇ ಪಂದ್ಯದಲ್ಲಿ ಉತ್ತಮ ಲಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದರು.
ಕೆಲಸದ ಒತ್ತಡವನ್ನು ನಿಭಾಯಿಸುವುದು ಹಾಗೂ ದೀರ್ಘಾವಧಿಯವರೆಗೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬೂಮ್ರಾಗೆ ವಿಶ್ರಾಂತಿ ಸೂಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಅದೇ ಹೊತ್ತಿಗೆ ಗಾಯದಿಂದ ಚೇತರಿಸಿಕೊಂಡಿರುವ ಬಲಗೈ ವೇಗಿ ಆಕಾಶ್ ದೀಪ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 33 ಓವರ್‌ಗಳನ್ನು ಎಸೆದಿದ್ದ ಬೂಮ್ರಾ 103 ರನ್ ಬಿಟ್ಟುಕೊಟ್ಟಿದ್ದರಲ್ಲದೆ ಎರಡು ವಿಕೆಟ್ ಮಾತ್ರ ಗಳಿಸಿದ್ದರು.
ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಅತಿ ಹೆಚ್ಚು ಓವರ್ ಎಸೆದಿದ್ದ (ಇನಿಂಗ್ಸ್‌ವೊಂದರಲ್ಲಿ) ಬೂಮ್ರಾ, ಮೊದಲ ಬಾರಿಗೆ 100ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು.
ಎಜ್‌ಬಾಸ್ಟನ್ ಟೆಸ್ಟ್‌ನಿಂದ ಹೊರಗುಳಿದಿದ್ದ ಬೂಮ್ರಾ, ಲೀಡ್ಸ್ ಹಾಗೂ ಲಾರ್ಡ್ಸ್ ಟೆಸ್ಟ್ ಪಂದ್ಯಗಳಲ್ಲಿ ತಲಾ ಐದು ವಿಕೆಟ್‌ಗಳ ಗೊಂಚಲು ಗಳಿಸಿದ್ದರು. ಅಲ್ಲದೆ ಮೂರು ಪಂದ್ಯಗಳಲ್ಲಾಗಿ ಒಟ್ಟು 14 ವಿಕೆಟ್‌ಗಳನ್ನು ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.