ಜಸ್‌ಪ್ರೀತ್ ಬೂಮ್ರಾ ಮತ್ತು ರಿಷಭ್ ಪಂತ್
–ಪಿಟಿಐ ಚಿತ್ರ
ಬೆಕೆನ್‌ಹ್ಯಾಮ್: ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಇವೆ. ಭಾರತ ತಂಡಕ್ಕೆ ಸರಣಿ ಜಯಿಸಬೇಕೆಂದರೆ ಈ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಅದರಿಂದಾಗಿ ಇದೇ 23ರಿಂದ ಆರಂಭವಾಗುವ ನಾಲ್ಕನೇ ಟೆಸ್ಟ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ಕಣಕ್ಕಿಳಿಸುವತ್ತ ಭಾರತ ತಂಡವು ಹೆಚ್ಚು ‘ಒಲವು’ ತೋರುತ್ತಿದೆ.
ಐದು ಪಂದ್ಯಗಳ ಸರಣಿಯಲ್ಲಿ ಅವರು ಎರಡರಲ್ಲಿ ವಿಶ್ರಾಂತಿ (ವರ್ಕಲೋಡ್ ಮ್ಯಾನೇಜ್‌ಮೆಂಟ್) ತೆಗೆದುಕೊಳ್ಳುವುದಾಗಿ ಹೇಳಿದ್ದರು. ಆ ಪ್ರಕಾರ ಎರಡನೇ ಟೆಸ್ಟ್‌ನಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಇದೀಗ ಉಳಿದಿರುವ ಎರಡರಲ್ಲಿ ಒಂದು ಪಂದ್ಯದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆಂಬ ಮಾತುಗಳು ಕೇಳಿಬಂದಿವೆ.
ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡೊಶೆಟ್, ‘ನಾವು ಮ್ಯಾಂಚೆಸ್ಟರ್‌ನಲ್ಲಿ ಬೂಮ್ರಾ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಅವರು ಮುಂದಿನ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ವಿಶ್ರಾಂತಿ ಪಡೆಯುವ ಕುರಿತು ನಮಗೆ ತಿಳಿದಿದೆ. ಸರಣಿಯು ಮಹತ್ವದ ಹಾದಿಯಲ್ಲಿದೆ. ಆದ್ದರಿಂದ ಮ್ಯಾಂಚೆಸ್ಟರ್ ಪಂದ್ಯದಲ್ಲಿ ಅವರನ್ನು ಆಡಿಸುವ ಕುರಿತು ತಂಡದ ಒಲವು ಇದೆ’ ಎಂದರು.
‘ಪಂದ್ಯಕ್ಕೂ ಮುನ್ನ ನಾವು ಕೆಲವು ಸಂಗತಿಗಳನ್ನು ಕೂಲಂಕಷವಾಗಿ ನೋಡುತ್ತೇವೆ. ಮ್ಯಾಂಚೆಸ್ಟರ್‌ನಲ್ಲಿ ಪಂದ್ಯವು ಎಷ್ಟು ದಿನಗಳಲ್ಲಿ ಮುಗಿಯುವ ಸಾಧ್ಯತೆ ಇದೆ? ನಾವು ಜಯಿಸುವ ಉತ್ತಮ ಅವಕಾಶಗಳು ಎಷ್ಟು ಇವೆ? ಎಂದು ಅಂದಾಜಿಸಲಾಗುವುದು. ನಂತರವಷ್ಟೇ ತಂಡದ ಸಂಯೋಜನೆ ಕುರಿತು ಯೋಜಿಸುತ್ತೇವೆ’ ಎಂದರು.
ತಂಡವು ಬೆಕೆನ್‌ಹ್ಯಾಮ್‌ನಲ್ಲಿ ಅಭ್ಯಾಸ ನಡೆಸಿತು. 19ರಂದು ತಂಡವು ಮ್ಯಾಂಚೆಸ್ಟರ್‌ಗೆ ತೆರಳುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.