ADVERTISEMENT

IPL-2020: ಇಬ್ಬರು ವಿಕೆಟ್‌ಕೀಪರ್‌ಗಳ ಪೈಪೋಟಿ

ಕಿಂಗ್ಸ್ ಇಲೆವನ್‌ ಪಂಜಾಬ್‌–ರಾಜಸ್ಥಾನ್‌ ರಾಯಲ್ಸ್ ಪಂದ್ಯ ಇಂದು; ಕೆ.ಎಲ್‌. ರಾಹುಲ್, ಸಂಜು ಸ್ಯಾಮ್ಸನ್ ಆಕರ್ಷಣೆ

ಪಿಟಿಐ
Published 26 ಸೆಪ್ಟೆಂಬರ್ 2020, 20:58 IST
Last Updated 26 ಸೆಪ್ಟೆಂಬರ್ 2020, 20:58 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್    
""
""

ಶಾರ್ಜಾ: ಭಾನುವಾರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ನಡೆಯಲಿರುವ ಪಂದ್ಯವು ಇಬ್ಬರು ವಿಕೆಟ್‌ಕೀಪರ್‌ಗಳ ನಡುವಣ ಪೈಪೋಟಿಯಾಗುವ ಸಾಧ್ಯತೆ ಇದೆ.

ಈ ಸಲದ ಐಪಿಎಲ್‌ನಲ್ಲಿ ಮೊಟ್ಟ ಮೊದಲ ಶತಕ ದಾಖಲಿಸಿರುವ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕೇರಳದ ಸ್ಫೋಟಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ ‘ಸಿಕ್ಸರ್‌ಗಳ ಮಳೆ’ ಸುರಿಸುವ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ಮತ್ತು ಸಂಜು ಪ್ರತಿನಿಧಿಸುವ ರಾಜಸ್ಥಾನ್ ರಾಯಲ್ಸ್‌ ತಂಡಗಳು ಇದೇ ಮೊದಲ ಸಲ ಇಲ್ಲಿ ಹಣಾಹಣಿ ನಡೆಸಲಿವೆ.

ಕಿಂಗ್ಸ್‌ ತಂಡವು ಎರಡು ಪಂದ್ಯ ಗಳನ್ನು ಆಡಿದೆ. ಮೊದಲ ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಸೋತಿತ್ತು.ಆದರೆ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಎದುರು ಭರ್ಜರಿ ಜಯ ದಾಖಲಿಸಿತ್ತು. ವಿರಾಟ್ ಕೊಹ್ಲಿ ಬಿಟ್ಟ ಕ್ಯಾಚ್‌ಗಳ ಲಾಭ ಪಡೆದಿದ್ದ ರಾಹುಲ್, ಅಜೇಯ 132 ರನ್‌ (69ಎಸೆತಗಳು) ಹೊಡೆದು ವಿಜೃಂಭಿಸಿದ್ದರು. ಅದರಲ್ಲಿ ಏಳು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆದ್ದರಿಂದ ಅವರನ್ನು ಕಟ್ಟಿಹಾಕಲು ರಾಯಲ್ಸ್‌ ಬೌಲರ್‌ಗಳಾದ ಜೋಫ್ರಾ ಆರ್ಚರ್, ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರು ಚಿತ್ತ ನೆಡುವುದು ಖಚಿತ.

ADVERTISEMENT

ಕಳೆದೆರಡು ಪಂದ್ಯಗಳಲ್ಲಿ ಕಿಂಗ್ಸ್‌ ತಂಡವು ‘ಯುನಿ ವರ್ಸಲ್ ಬಾಸ್’ ಕ್ರಿಸ್ ಗೇಲ್ ಅವರಿಗೆ ಕಣಕ್ಕಿಳಿಯುವ ಅವಕಾಶ ಕೊಟ್ಟಿರಲಿಲ್ಲ. ಸತತ ವೈಫಲ್ಯ ಅನುಭವಿಸುತ್ತಿರುವ ನಿಕೊಲಸ್ ಪೂರನ್ ಅವರಿಗೆ ವಿಶ್ರಾಂತಿ ನೀಡಬಹುದು. ಹೋದ ಪಂದ್ಯದಲ್ಲಿ ಮಿಂಚಿರುವ ಸ್ಪಿನ್ನರ್ ರವಿ ಬಿಷ್ಣೋಯಿ, ಮುರುಗನ್ ಅಶ್ವಿನ್ ಜೋಡಿಯು ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ.

ರಾಯಲ್ಸ್‌ ತಂಡದ ಬ್ಯಾಟಿಂಗ್ ಕೂಡ ಬಲಿಷ್ಠ ವಾಗಿದೆ. ನಾಯಕ ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ಜೋಸ್ ಬಟ್ಲರ್, ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, ಡೇವಿಡ್ ಮಿಲ್ಲರ್ ರನ್‌ ಹೊಳೆ ಹರಿಸುವ ಸಮರ್ಥರು. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ 216 ರನ್‌ಗಳ ಗುರಿಯನ್ನು ರಾಯಲ್ಸ್ ನೀಡಿತ್ತು.

ಉಭಯ ಬಳಗದಲ್ಲಿ ಬಲಾಢ್ಯ ಬ್ಯಾಟಿಂಗ್ ಪಡೆ ಇರು ವುದರಿಂದ ಶಾರ್ಜಾದ ಕ್ರೀಡಾಂಗಣದಲ್ಲಿ ರನ್‌ಗಳ ಹೊಳೆ ಹರಿಯುವ ಸಾಧ್ಯತೆ ಹೆಚ್ಚಿದೆ. ದುಬೈ ಕ್ರೀಡಾಂಗಣದ ಬೌಂಡರಿಗಿಂತ ಶಾರ್ಜಾದ ಗಡಿರೇಖೆಗಳು ಚಿಕ್ಕದಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.