ಕುಲದೀಪ್ ಯಾದವ್
ನವದೆಹಲಿ: ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಆಟದ ತಂತ್ರಗಳಿಗೆ ಸಂಬಂಧಿಸಿದಂತೆ ತಮ್ಮ ಅಚಲ ನಿಲುವುಗಳಿಗೆ ಅಂಟಿಕೊಂಡವರು. ಬ್ಯಾಟಿಂಗ್ ಆಳ ಬಲಪಡಿಸುವ ಉದ್ದೇಶದಿಂದ ಆಲ್‌ರೌಂಡರ್‌ಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿರುವುದೂ ಇವುಗಳಲ್ಲಿ ಒಂದು.
ಹೆಡ್ ಕೋಚ್ ಅವರ ಈ ನಿಲುವಿನಿಂದಾಗಿ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಪ್ರಸ್ತುತ ತಂಡದಲ್ಲಿ ಸ್ಥಾನ ಪಡೆಯುವುದು ಕಠಿಣವಾಗುತ್ತಿದೆ. ಈ ಎಡಗೈ ರಿಸ್ಟ್ ಸ್ಪಿನ್ನರ್ 113 ಪಂದ್ಯಗಳಿಂದ 181 ವಿಕೆಟ್‌ಗಳನ್ನು ಪಡೆದಿದ್ದಾರೆ.
ಈ ಸರಣಿಯಲ್ಲಿ ಮೂರೇ ಪಂದ್ಯಗಳು ಇರುವುದರಿಂದ, ಬೌನ್ಸ್ ಮತ್ತು ಸೀಮ್ ಚಲನೆಗೆ ಅವಕಾಶವಿರುವ ಆಸ್ಟ್ರೇಲಿಯಾದ ಅಂಗಣದಲ್ಲಿ ಗಂಭೀರ್ ಮುಂದೆಯೂ ಮೂವರು ಆಲ್‌ರೌಂಡರ್‌ಗಳನ್ನು ಆಡಿಸುತ್ತಾರೆಯೇ ಎಂದು ಹೇಳುವುದು ಕಷ್ಟ.
ಮಳೆಯಿಂದಾಗಿ ಪದೇ ಪದೇ ನಿಲುಗಡೆಯಾದ ಮೊದಲ ಪಂದ್ಯದಲ್ಲಿ ಭಾರತ ಕೇವಲ 136 ರನ್ ಗಳಿಸಿತ್ತು. ರಕ್ಷಿಸಲು ಅಲ್ಪಮೊತ್ತ ಮಾತ್ರ ಇದ್ದ ಕಾರಣ ಹಿನ್ನಡೆಗೆ ಬೌಲಿಂಗ್ ಘಟಕವನ್ನು ದೂರುವುದು ನ್ಯಾಯಸಮ್ಮತವೆನಿಸದು.
ಆದರೆ ಭಾರತ ಮೂವರು ಆಲ್‌ರೌಂಡರ್‌ಗಳನ್ನು– ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ (ಕೊನೆಯ ಇಬ್ಬರು ಪರಿಣತ ಸ್ಪಿನ್ನರ್‌ಗಳು)– ಅವರ ಮೇಲೆ ಉಳಿದ ಪಂದ್ಯಗಳಿಗೂ ವಿಶ್ವಾಸವಿಟ್ಟಲ್ಲಿ, ಕಾನ್ಪುರದ ಬೌಲರ್‌ಗೆ ತಂಡದಲ್ಲಿ ಸ್ಥಾನ ಕಲ್ಪಿಸುವುದು ಅಸಂಭವ ಎನಿಸಲಿದೆ.
ಇದೇ 23ರಂದು (ಗುರುವಾರ) ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಇದೇ ಹನ್ನೊಂದರ ಬಳಗವನ್ನು ಉಳಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆದರೆ ಪ್ರವಾಸಿ ತಂಡಕ್ಕೆ ಈ ಸಂಯೋಜನೆ ಸೂಕ್ತವಾಗಿದೆಯೇ ಎಂಬ ಪ್ರಶ್ನೆ ಉಳಿಯಲಿದೆ.
ಕುಲದೀಪ್ ಅವರನ್ನು ಹೊರಗಿಡುತ್ತಿರುವುದು ಗಂಭೀರ್ ಅವರ ಕಾಲಕ್ಕೆ ಸೀಮಿತವಾಗಿಲ್ಲ. ಈ ಹಿಂದೆ ರವಿ ಶಾಸ್ತ್ರಿ ಹೆಡ್ ಕೋಚ್ ಆಗಿದ್ದಾಗಲೂ ಹೀಗೇ ಆಗಿತ್ತು. ರಾಹುಲ್ ದ್ರಾವಿಡ್ ಅವರ ಅವಧಿಯಲ್ಲೂ ಇದು ಪುನರಾವರ್ತನೆಯಾಯಿತು.
ಈ ರೀತಿ ಮಾಡುವುದರಿಂದ ಕುಲದೀಪ್ ಅವರ ಮನೋಬಲದ ಮೇಲೆ ಪರಿಣಾಮವಾಗಲಿದೆ ಎಂದು ದಿಗ್ಗಜ ಸ್ಪಿನ್ನರ್‌ಗಳಲ್ಲಿ ಒಬ್ಬರದಾದ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಡುತ್ತಾರೆ.
‘ಸುರಕ್ಷಿತ ಬೌಲರ್ ಆಗಿ ವಾಷಿಂಗ್ಟನ್ ಅವರನ್ನು ಆಡಿಸಬೇಕೆ ಅಥವಾ ‘ಹೈ ರಿಸ್ಕ್, ಹೈ ರಿವಾರ್ಡ್’ ಆಟಗಾರ ಕುಲದೀಪ್ ಅವರನ್ನು ಆಯ್ಕೆ ಮಾಡಬೇಕೇ’ ಎಂಬುದು ಗಂಭೀರ್ ಮತ್ತು ಶುಭಮನ್ ಗಿಲ್ ಅವರ ಮುಂದಿರುವ ಪ್ರಶ್ನೆ. ಉತ್ತರ ಸುಲಭವಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.