ADVERTISEMENT

ವಾರ್ಷಿಕ ಸರ್ವಸದಸ್ಯರ ಸಭೆ ಮುಂದೂಡಿದ ಬಿಸಿಸಿಐ

ಪಿಟಿಐ
Published 11 ಸೆಪ್ಟೆಂಬರ್ 2020, 13:43 IST
Last Updated 11 ಸೆಪ್ಟೆಂಬರ್ 2020, 13:43 IST
ಸೌರವ್ ಗಂಗೂಲಿ ಮತ್ತು ಜಯ್ ಶಾ
ಸೌರವ್ ಗಂಗೂಲಿ ಮತ್ತು ಜಯ್ ಶಾ   

ನವದೆಹಲಿ: ಇದೇ ತಿಂಗಳ 30ರಂದು ನಡೆಯಬೇಕಾಗಿದ್ದ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮುಂದೂಡಿದೆ.

‘ಕೋವಿಡ್ –19 ಕಾರಣದಿಂದ ಸಭೆಯನ್ನು ಮುಂದೂಡಲಾಗುತ್ತಿದೆ. ಆನ್‌ಲೈನ್ ಮೂಲಕ ನಡೆಸಲು ಸಾಧ್ಯವಾಗುವುದಿಲ್ಲ. ತಮಿಳುನಾಡಿನ ನೋಂದಣಿ ಇಲಾಖೆಯು ಹೊರಡಿಸಿರುವ ಸೂಚನೆಯ ಪ್ರಕಾರ; 1975ರ ತಮಿಳುನಾಡು ಸೊಸೈಟಿ ಕಾಯಿದೆಯ ಪ್ರಕಾರ ಈ ಬಾರಿಯ ವಾರ್ಷಿಕ ಸಭೆಯನ್ನು ಮೂರು ತಿಂಗಳ ಕಾಲ ಮುಂದೂಡಲು ವಿಶೇಷ ರಿಯಾಯಿತಿ ಇದೆ. ಆದ್ದರಿಂದ ಡಿಸೆಂಬರ್‌ನವರೆಗೂ ಮುಂದೂಡಲಾಗುವುದು’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಿಯಮದ ಪ್ರಕಾರ ಆನ್‌ಲೈನ್‌ನಲ್ಲಿ ವಾರ್ಷಿಕ ಸಭೆಗಳನ್ನು ಆಯೋಜಿಸುವಂತಿಲ್ಲ. ವಾಣಿಜ್ಯ ತೆರಿಗೆ ಮತ್ತು ನೋಂದಣಿ ಇಲಾಖೆಯು 2020ರ ಜೂನ್ 16ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ 89ರ ಅಡಿಯಲ್ಲಿ ಈ ನಿಯಮವಿದೆ’ ಎಂದು ಶಾ ವಿವರಿಸಿದ್ದಾರೆ.

ADVERTISEMENT

ಕಾನೂನು ತಜ್ಞರ ಸಲಹೆ ಪಡೆದ ನಂತರ ಎಜಿಎಂ ಮುಂದೂಡಲಾಗಿದೆ. ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್ ಸಭೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ಅವಕಾಶವಿದೆ.

ಹೋದ ವರ್ಷದ ಅಕ್ಟೋಬರ್‌ನಲ್ಲಿ ಸೌರವ್ ಗಂಗೂಲಿ ಅಧ್ಯಕ್ಷರಾದ ನಂತರ ವಾರ್ಷಿಕ ಸರ್ವಸದಸ್ಯರ ಸಭೆ ನಡೆಸಲಾಗಿತ್ತು. ಅದಕ್ಕೂ ಮುಂಚಿನ 33 ತಿಂಗಳು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಕಾರ್ಯನಿರ್ವಹಿಸಿದ್ದ ಕಾರಣ ಎಜಿಎಂ ನಡೆದಿರಲಿಲ್ಲ. ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯು ಶಿಫಾರಸುಗಳ ಅನ್ವಯ ರೂಪಿಸಲಾದ ಹೊಸ ನಿಯಮಾವಳಿಯನ್ನು ಮಂಡಳಿಯಲ್ಲಿ ಜಾರಿ ಮಾಡಲು ಸಿಒಎಯನ್ನು ನೇಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.