ಮುಂಬೈ: ಕ್ರೀಡಾಂಗಣದಲ್ಲಿ ಎಂಥದ್ದೇ ಒತ್ತಡ ಸನ್ನಿವೇಶದಲ್ಲೂ ಶಾಂತಚಿತ್ತರಾಗಿರುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ‘ಕ್ಯಾಪ್ಟನ್ ಕೂಲ್’ ಎಂದೇ ಜನಪ್ರಿಯ. ಇದೀಗ ಆ ಬಿರುದನ್ನೇ ಅವರು ತಮ್ಮ ವ್ಯಾಪಾರ ಚಿಹ್ನೆಯಾಗಿ ಬಳಸಿಕೊಳ್ಳುವ ಹೊಸ್ತಿಲಲ್ಲಿದ್ದಾರೆ.
‘ಕ್ಯಾಪ್ಟನ್ ಕೂಲ್’ ಎಂಬ ಟ್ರೇಡ್‌ಮಾರ್ಕ್ ಅಧಿಕೃತವಾಗಿ ಟ್ರೇಡ್ ಮಾರ್ಕ್ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ಇದಕ್ಕೆ ತಕರಾರು ಸಲ್ಲಿಸಲು ನಾಲ್ಕು ತಿಂಗಳ ಕಾಲಾವಧಿ ನೀಡಲಾಗಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಒಂದೊಮ್ಮೆ ‘ಕ್ಯಾಪ್ಟನ್ ಕೂಲ್’ಗೆ ಯಾವುದೇ ತಕರಾರುಗಳು ಸಲ್ಲಿಕೆಯಾಗದಿದ್ದಲ್ಲಿ, ಇದು ಧೋನಿ ಅವರ ಕ್ರೀಡೆ ಮತ್ತು ಮನರಂಜನಾ ವ್ಯಾಪಾರದ ಚಿಹ್ನೆಯಾಗಲಿದೆ.
‘ಇದೇ ರೀತಿಯ ಕೋರಿಕೆಯೊಂದು ಸಲ್ಲಿಕೆಯಾಗಿದ್ದರಿಂದ ಧೋನಿ ಅವರ ಕೋರಿಕೆಯನ್ನು ಈ ಹಿಂದೆ ತಿರಸ್ಕರಿಸಲಾಗಿತ್ತು. ಆದರೆ ಇದೀಗ ಆದೇಶವು ಧೋನಿ ಪರವಾಗಿ ಬಂದಿದೆ. ಧೋನಿ ಅವರ ವ್ಯಕ್ತಿತ್ವಕ್ಕೆ ದೊರೆತ ಹೆಸರಿನ ಹಕ್ಕನ್ನು ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ಟ್ರೇಡ್‌ಮಾರ್ಕ್ ಕಾನೂನಿನ ಅನ್ವಯವೇ ಪಡೆಯುವ ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ’ ಎಂದು ಧೋನಿ ಪರ ವಕೀಲರು ಹೇಳಿದ್ದಾರೆ.
‘ಕ್ಯಾಪ್ಟನ್ ಕೂಲ್ ಎನ್ನುವುದು ಕ್ರಿಕೆಟ್‌ನಲ್ಲಿ ಧೋನಿ ಅವರ ಅದ್ವಿತೀಯ ಗುಣವನ್ನು ಪ್ರತಿನಿಧಿಸುತ್ತದೆ. ಅವರ ಅಭಿಮಾನಿಗಳು ಮತ್ತು ತಂಡದಲ್ಲೂ ಧೋನಿ ಅವರು ‘ಕ್ಯಾಪ್ಟನ್ ಕೂಲ್’ ಎಂದೇ ಜನಜನಿತ. ಮಾಧ್ಯಮಗಳೂ ಅವರನ್ನು ಇದೇ ಹೆಸರಿನಿಂದಲೇ ಗುರುತಿಸಿವೆ’ ಎಂದು ವಕೀಲರು ವಾದ ಮಂಡಿಸಿದರು.
‘ಕ್ಯಾಪ್ಟನ್ ಕೂಲ್’ ಎಂಬುದು ಕೇವಲ ಒಂದು ಹೆಸರಲ್ಲ, ಬದಲಿಗೆ ಧೋನಿ ಅವರ ವಾಣಿಜ್ಯ ವರ್ಚಸ್ಸೂ ಹೌದು ಎಂದು ನಿಯತಕಾಲಿಕೆಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.