ADVERTISEMENT

ಚಾಮರಿ ಅಟಪಟ್ಟು ಭರ್ಜರಿ ಆಟ

ಟಿ20: ಕೊನೆಯ ಪಂದ್ಯದಲ್ಲಿ ಲಂಕಾ ಮಹಿಳೆಯರಿಗೆ ಜಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 14:17 IST
Last Updated 27 ಜೂನ್ 2022, 14:17 IST
ಹರ್ಮನ್‌ಪ್ರೀತ್‌ ಕೌರ್‌ –ಪಿಟಿಐ ಚಿತ್ರ
ಹರ್ಮನ್‌ಪ್ರೀತ್‌ ಕೌರ್‌ –ಪಿಟಿಐ ಚಿತ್ರ   

ದಂಬುಲಾ (ಪಿಟಿಐ): ಶ್ರೀಲಂಕಾ ನೆಲದಲ್ಲಿ ಟಿ20 ಕ್ರಿಕೆಟ್‌ ಸರಣಿಯನ್ನು ‘ಕ್ಲೀನ್‌ಸ್ವೀಪ್’ ಮಾಡಬೇಕೆಂಬ ಭಾರತ ಮಹಿಳಾ ತಂಡದ ಆಸೆಗೆ ಚಾಮರಿ ಅಟಪಟ್ಟು ಅಡ್ಡಿಯಾದರು.

ಸೋಮವಾರ ನಡೆದ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಚಾಮರಿ ಅವರ ಭರ್ಜರಿ ಬ್ಯಾಟಿಂಗ್‌ (ಔಟಾಗದೆ 80) ನೆರವಿನಿಂದ ಆತಿಥೇಯ ತಂಡ ಏಳು ವಿಕೆಟ್‌ಗಳ ಜಯ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 5 ವಿಕೆಟ್‌ಗೆ 138 ರನ್‌ ಗಳಿಸಿದರೆ, ಲಂಕಾ ಇನ್ನೂ ಮೂರು ಓವರ್‌ಗಳು ಇರುವಂತೆಯೇ ಗೆಲುವಿನ ನಗು ಬೀರಿತು. ಮೊದಲ ಎರಡು ಪಂದ್ಯ ಗೆದ್ದಿದ್ದ ಹರ್ಮನ್‌ಪ್ರೀತ್‌ ಕೌರ್‌ ಬಳಗ ಸರಣಿಯನ್ನು 2–1 ರಲ್ಲಿ ತನ್ನದಾಗಿಸಿಕೊಂಡಿತು.

ADVERTISEMENT

ಸವಾಲಿನ ಗುರಿ ಬೆನ್ನಟ್ಟಿದ ಲಂಕಾ ತಂಡ, ವಿಷ್ಮಿ ಗುಣರತ್ನೆ ಮತ್ತು ಹರ್ಷಿತಾ ಸಮರವಿಕ್ರಮ (13) ಅವರನ್ನು ಬೇಗನೇ ಕಳೆದುಕೊಂಡಿತು. ಚಾಮರಿ ಮತ್ತು ನೀಲಾಕ್ಷಿ ಡಿಸಿಲ್ವ (30 ರನ್‌, 28 ಎ, 4X4) ಮೂರನೇ ವಿಕೆಟ್‌ಗೆ 77 ರನ್‌ ಸೇರಿಸಿ ಗೆಲುವಿನ ಕನಸು ಜೀವಂತವಾಗಿರಿಸಿಕೊಂಡರು.

ನೀಲಾಕ್ಷಿ ಔಟಾದರೂ ಭರ್ಜರಿ ಆಟ ಮುಂದುವರಿಸಿದ ಚಾಮರಿ ಅವರು ಕವಿಶಾ ಜತೆಗೂಡಿ ಸ್ಮರಣೀಯ ಗೆಲುವು ತಂದುಕೊಟ್ಟರು. ಚಾಮರಿ 14 ಬೌಂಡರಿ ಮತ್ತು ಒಂದು ಸಿಕ್ಸರ್‌ ಗಳಿಸಿದರು.

ಕೌರ್‌, ಜೆಮಿಮಾ ಆಸರೆ: ಶಫಾಲಿ ವರ್ಮ (5) ಅವರನ್ನು ಹೊರತುಪಡಿಸಿ ಭಾರತದ ಅಗ್ರ ಕ್ರಮಾಂಕದ ಎಲ್ಲ ಬ್ಯಾಟರ್‌ಗಳು ಉತ್ತಮ ಆಟವಾಡಿದರು. ಹರ್ಮನ್‌ಪ್ರೀತ್ ಕೌರ್‌ (ಅಜೇಯ 39, 33 ಎ., 4X3, 6X1) ಮತ್ತು ಜೆಮಿಮಾ ರಾಡ್ರಿಗಸ್‌ (33 ರನ್‌, 30 ಎ., 4X3) ಅವರು ಕೊನೆಯಲ್ಲಿ ರನ್‌ರೇಟ್‌ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್: ಭಾರತ 5ಕ್ಕೆ 138 (20 ಓವರ್) ಸ್ಮೃತಿ ಮಂದಾನ 22, ಎಸ್‌.ಮೇಘನಾ 22, ಹರ್ಮನ್‌ಪ್ರೀತ್‌ ಕೌರ್ ಔಟಾಗದೆ 39, ಜೆಮಿಮಾ ರಾಡ್ರಿಗಸ್‌ 33, ಪೂಜಾ ವಸ್ತ್ರಕರ್‌ 13, ಸುಗಂಧಿಕಾ ಕುಮಾರಿ 28ಕ್ಕೆ 1, ಅಮಾ ಕಾಂಚನ 22ಕ್ಕೆ 1, ಒಶಾದಿ ರಣಸಿಂಘೆ 13ಕ್ಕೆ 1, ಇನೊಕ ರಣವೀರ 31ಕ್ಕೆ 1

ಶ್ರೀಲಂಕಾ: 3ಕ್ಕೆ 141 (17 ಓವರ್) ಚಾಮರಿ ಅಟಪಟ್ಟು ಔಟಾಗದೆ 80, ಹರ್ಷಿತಾ ಸಮರವಿಕ್ರಮ 13, ನೀಲಾಕ್ಷಿ ಡಿಸಿಲ್ವ 30, ಕವಿಶಾ ದಿಲ್ಹರಿ ಔಟಾಗದೆ 7, ರೇಣುಕಾ ಸಿಂಗ್ 27ಕ್ಕೆ 1, ರಾಧಾ ಯಾದವ್ 41ಕ್ಕೆ 1

ಫಲಿತಾಂಶ: ಶ್ರೀಲಂಕಾ ತಂಡಕ್ಕೆ 7 ವಿಕೆಟ್ ಗೆಲುವು; ಭಾರತಕ್ಕೆ 2–1 ರಲ್ಲಿ ಸರಣಿ ಜಯ

ಪಂದ್ಯಶ್ರೇಷ್ಠ: ಚಾಮರಿ ಅಟಪಟ್ಟು

ಸರಣಿಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್

ಚಾಮರಿ ದಾಖಲೆ

ಟಿ20 ಕ್ರಿಕೆಟ್‌ನಲ್ಲಿ 2 ಸಾವಿರ ರನ್‌ ಪೂರೈಸಿದ ಲಂಕಾದ ಮೊದಲ ಬ್ಯಾಟರ್‌ ಎಂಬ ಗೌರವವನ್ನು 32 ವರ್ಷದ ಚಾಮರಿ ತಮ್ಮದಾಗಿಸಿಕೊಂಡರು. ಪುರುಷರ ತಂಡದಲ್ಲೂ ಯಾರೂ ಈ ಸಾಧನೆ ಮಾಡಿಲ್ಲ. 1,889 ರನ್‌ ಗಳಿಸಿರುವ ತಿಲಕರತ್ನೆ ದಿಲ್ಶನ್‌ ಅವರು ಪುರುಷರ ತಂಡದಲ್ಲಿ ಹೆಚ್ಚು ರನ್‌ ಗಳಿಸಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.