ಅಫ್ಗಾನಿಸ್ತಾನದ ಸಾಧಿಕುಲ್ಲಾ ಅಟಲ್ ಅರ್ಧಶತಕದ ಸಂಭ್ರಮ
ಪಿಟಿಐ ಚಿತ್ರ
ಲಾಹೋರ್: ಅಫ್ಗಾನಿಸ್ತಾನ ತಂಡದ ಕೆಚ್ಚೆದೆಯ ಹೋರಾಟಕ್ಕೆ ಮಳೆ ಅಡ್ಡಿಯಾಯಿತು. ಆಸ್ಟ್ರೇಲಿಯಾ ತಂಡವು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ಶುಕ್ರವಾರ ರಾತ್ರಿ ಸಾದಿಕುಲ್ಲಾ ಅಟಲ್ (85; 95ಎ, 4X6, 6X3) ಮತ್ತು ಅಜ್ಮತ್‌ಉಲ್ಲಾ ಒಮರ್‌ಝೈ (67; 63ಎ, 4X1, 6X5) ಅವರ ಆಕರ್ಷಕ ಅರ್ಧಶತಕಗಳ ಬಲದಿಂದ ಅಫ್ಗಾನಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ 50 ಓವರ್‌ಗಳಲ್ಲಿ 273 ರನ್ ಗಳಿಸಿತ್ತು.
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 12.5 ಓವರ್‌ಗಳಲ್ಲಿ 1 ವಿಕೆಟ್‌ಗೆ 109 ರನ್ ಗಳಿಸಿತು. ಟ್ರಾವಿಸ್ ಹೆಡ್ (ಔಟಾಗದೇ 59; 40ಎಸೆತ, 4X9, 6X1) ಮತ್ತು ಸ್ಟೀವ್ ಸ್ಮಿತ್ (ಔಟಾಗದೇ 19; 22ಎ) ಅವರು ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು. ಈ ಹಂತದಲ್ಲಿ ಆರಂಭವಾದ ಮಳೆ ರಭಸವಾಗಿ ಸುರಿಯಿತು. ಮೈದಾನದಲ್ಲಿ ನೀರು ತುಂಬಿತು.
ಮಳೆ ನಿಂತು ಹೋದ ಮೇಲೆ ಪಿಚ್ ಮತ್ತು ಹೊರಾಂಗಣವನ್ನು ಪರೀಕ್ಷಿಸಿದ ಅಂಪೈರ್‌ಗಳು ಪಂದ್ಯವನ್ನು ಸ್ಥಗಿತಗೊಳಿಸಿದರು. ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಿದರು. ಒಟ್ಟು 4 ಅಂಕ ಗಳಿಸಿದ ಆಸ್ಟ್ರೇಲಿಯಾ ನಾಲ್ಕರ ಘಟ್ಟ ಪ್ರವೇಶಿಸಿತು. 3 ಅಂಕದೊಂದಿಗೆ ಅಫ್ಗನ್ ಪಡೆ ಅಭಿಯಾನ ಮುಗಿಸಿತು. ಆದರೆ ಅಟಲ್ ಮತ್ತು ಒಮರ್‌ಝೈ ಆಟ ನೆನಪಿನಲ್ಲಿ ಉಳಿಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಗನ್ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆಸ್ಟ್ರೇಲಿಯಾದ ವೇಗಿ ಸ್ಪೆನ್ಸರ್ ಜಾನ್ಸನ್ (49ಕ್ಕೆ2), ಬೆನ್ ದ್ವಾರಶೈಸ್ (47ಕ್ಕೆ3) ಮತ್ತು ಸ್ಪಿನ್ನರ್ ಆ್ಯಡಂ ಜಂಪಾ (48ಕ್ಕೆ2) ವಿಕೆಟ್ ಗಳಿಸಿದರು.
ಆದರೆ ಅಫ್ಗನ್ ಪಡೆಯು ಅನುಭವಿ ಆಸ್ಟ್ರೇಲಿಯಾ ಎದುರು ತೋರಿದ ದಿಟ್ಟ ಬ್ಯಾಟಿಂಗ್ ಗಮನ ಸೆಳೆಯಿತು. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಸ್ಪೆನ್ಸರ್ ಜಾನ್ಸನ್ ಎಸೆತದಲ್ಲಿ ರೆಹಮಾನುಲ್ಲಾ ಗುರ್ಬಾಜ್ ವಿಕೆಟ್ ಉರುಳಿತು. ಕ್ರೀಸ್‌ಗೆ ಬಂದ ಅಟಲ್, ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು. ಇಬ್ರಾಹಿಂ ಜದ್ರಾನ್ (22; 28ಎ) ಮತ್ತು ಅಟಲ್ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿದರು.
ಅಟಲ್ ಮತ್ತು ನಾಯಕ ಶಹೀದಿ (20 ರನ್) ಅವರು 4ನೇ ವಿಕೆಟ್ ಜೊತೆಯಾಟದಲ್ಲಿ 68 ರನ್ ಸೇರಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತವನ್ನು ಸಿಕ್ಸರ್‌ಗೆತ್ತಿ ಅರ್ಧಶತಕ ಪೂರೈಸಿದರು. ಆ್ಯಡಂ ಜಂಪಾ ಓವರ್‌ನಲ್ಲಿಯೂ ಎರಡು ಸಿಕ್ಸರ್ ಸಿಡಿಸಿದರು. ಶತಕಕ್ಕೆ 15 ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಅಟಲ್ ಅವರಿಗೆ ಸ್ಪೆನ್ಸರ್ ಜಾನ್ಸನ್ ಪೆವಿಲಿಯನ್ ದಾರಿ ತೋರಿಸಿದರು. ಸ್ವಲ್ಪ ಹೊತ್ತಿನಲ್ಲಿ ಶಹೀದಿ ಕೂಡ ನಿರ್ಗಮಿಸಿದರು.
ಆಗ ಕ್ರೀಸ್‌ಗೆ ಬಂದ ಒಮರ್‌ಝೈ ಬೀಸಾಟ ಆರಂಭಿಸಿದರು. ಆದರೆ ಇನ್ನೊಂದು ಬದಿಯಲ್ಲಿ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದನ್ನು ಲೆಕ್ಕಿಸದ ಒಮರ್‌ಝೈ ಮಾತ್ರ ಮೈದಾನದಲ್ಲಿ ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು. ರಶೀದ್ ಖಾನ್ ಕೂಡ 17 ಎಸೆತಗಳಲ್ಲಿ 19 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು
ಅಫ್ಗಾನಿಸ್ತಾನ: 50 ಓವರ್‌ಗಳಲ್ಲಿ 273 (ಇಬ್ರಾಹಿಂ ಜದ್ರಾನ್ 22, ಸಾಧಿಕುಲ್ಲಾ ಅಟಲ್ 85, ಹಷ್ಮತ್‌ಉಲ್ಲಾ ಶಹೀದಿ 20, ಅಜ್ಮತ್ ಉಲ್ಲಾ ಒಮರ್‌ಝೈ 67, ರಶೀದ್ ಖಾನ್ 19, ಸ್ಪೆನ್ಸರ್ ಜಾನ್ಸನ್ 49ಕ್ಕೆ2, ಬೆನ್ ದ್ವಾರಶೈಸ್ 47ಕ್ಕೆ3, ಆ್ಯಡಂ ಜಂಪಾ 48ಕ್ಕೆ2)
ಆಸ್ಟ್ರೇಲಿಯಾ: 12.5 ಓವರ್‌ಗಳಲ್ಲಿ 1 ವಿಕೆಟ್‌ಗೆ 109 (ಮ್ಯಾಥ್ಯೂ ಶಾರ್ಟ್ 20, ಟ್ರಾವಿಸ್ ಹೆಡ್ ಔಟಾಗದೇ 59, ಸ್ಟೀವ್ ಸ್ಮಿತ್ ಔಟಾಗದೇ 19, ಅಜ್ಮತ್‌ಉಲ್ಲಾ ಒಮರ್‌ಝೈ 13ಕ್ಕೆ1)
ಮಳೆಯಿಂದಾಗಿ ಪಂದ್ಯ ಸ್ಥಗಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.