ADVERTISEMENT

ಚಾಂಪಿಯನ್ಸ್ ಟ್ರೋಫಿ: ನೆಟ್ಸ್‌ನಲ್ಲಿ ಭಾರತ; ಲೆಂಗ್ತ್ ಸರಿಪಡಿಸಿಕೊಳ್ಳಲು ಶಮಿ ಯತ್ನ

ಪಿಟಿಐ
Published 16 ಫೆಬ್ರುವರಿ 2025, 23:30 IST
Last Updated 16 ಫೆಬ್ರುವರಿ 2025, 23:30 IST
<div class="paragraphs"><p>ಮೊಹಮ್ಮದ್ ಶಮಿ</p></div>

ಮೊಹಮ್ಮದ್ ಶಮಿ

   

ದುಬೈ: ಚಾಂಪಿಯನ್ಸ್‌ ಟ್ರೋಫಿ ಆಡಲು ಇಲ್ಲಿಗೆ ಬಂದಿಳಿದಿರುವ ಭಾರತ ತಂಡವು ಐಸಿಸಿ ಅಕಾಡೆಮಿ ಮೈದಾನದಲ್ಲಿ ಭಾನುವಾರ ಪೂರ್ಣಪ್ರಮಾಣದಲ್ಲಿ ನೆಟ್‌ ಪ್ರಾಕ್ಟೀಸ್‌ನಲ್ಲಿ ತೊಡಗಿತು. ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಬೌಲಿಂಗ್ ಕೋಚ್‌ ಮೋರ್ನೆ ಮಾರ್ಕೆಲ್ ಉಸ್ತುವಾರಿಯಲ್ಲಿ ಹೆಚ್ಚಿನ ಏಕಾಗ್ರತೆಯೊಡನೆ ಸಾಕಷ್ಟು ಸಮಯ ಅಭ್ಯಾಸದಲ್ಲಿ ಕಳೆದರು.

ಫೆಬ್ರುವರಿ 20ರಂದು ಭಾರತ ಮೊದಲ ಪಂದ್ಯ ಆಡಲಿದ್ದು ಬಾಂಗ್ಲಾದೇಶ ಎದುರಾಳಿಯಾಗಿದೆ.

ADVERTISEMENT

ಹೊಸ ಮಾರ್ಗಸೂಚಿ ಕಟ್ಟುನಿಟ್ಟಾಗಿರುವ ಕಾರಣ ನಾಯಕ ರೋಹಿತ್ ಶರ್ಮಾ ಅವರಿಂದ ಹಿಡಿದು ತಂಡದ ಅತಿ ಕಿರಿಯ ಆಟಗಾರ ಹರ್ಷಿತ್‌ ರಾಣಾ ಅವರವರೆಗೆ ಎಲ್ಲರೂ ಹಾಜರಿದ್ದರು. ಆದರೆ ಶಮಿ ಅವರು ಹೆಚ್ಚಿನ ಅಭ್ಯಾಸಕ್ಕೆ ಒತ್ತು ನೀಡಿದ್ದು ಗಮನಸೆಳೆಯಿತು.

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿದ್ದ ಶಮಿ ಆರಂಭದಲ್ಲಿ ರನ್‌ಪ್‌ ಕಡಿಮೆ ಮಾಡಿ ಅವರು ಕೆಲವು ಎಸೆತಗಳನ್ನು ಪ್ರಯೋಗಿಸಿ ಇಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳುವ ಯತ್ನ ನಡೆಸಿದರು. ಇತರ ಕೆಲವು ಆಟಗಾರರು ದೈಹಿಕ ಕಸರತ್ತಿನಲ್ಲಿ ತೊಡಗಿದರು.

ಬ್ಯಾಟರ್‌ಗಳು ನೆಟ್ಸ್‌ಗೆ ಪ್ರವೇಶಿಸುತ್ತಿದ್ದಂತೆ, ಶಮಿ ತಮ್ಮ ಲೆಂಗ್ತ್‌ ಹೊಂದಿಸಿಕೊಳ್ಳಲು ಯತ್ನಿಸಿದ್ದು ಕಾಣಿಸಿತು. ಯಾವ ಲೆಂಗ್ತ್‌ ಸೂಕ್ತವಾಗಬಹುದೆಂದು ಕೋಚ್‌ ಜೊತೆ ಸಮಾಲೋಚನೆ ನಡೆಸಿದರು.

ಹಾರ್ದಿಕ್‌ ಪಾಂಡ್ಯ ಮತ್ತು ಶ್ರೇಯಸ್‌ ಅಯ್ಯರ್ ಅವರು ಕುಲದೀಪ್ ಯಾದವ್ ಮತ್ತು ಇತರ ಸ್ಪಿನ್ನರ್‌ಗಳನ್ನು ಎದುರಿಸಿ ದೊಡ್ಡ ಹೊಡೆತಗಳನ್ನು ಆಡಿದರು. ಇಂಥ ಒಂದು ಪ್ರಬಲ ಹೊಡೆತದಲ್ಲಿ ಚೆಂಡು ಆಕಸ್ಮಿಕವಾಗಿ ಪಂತ್ ಅವರ ಮೊಣಕಾಲಿಗೆ ಬಡಿಯಿತು. ಅವರು ಕೆಲಕಾಲ ನೋವು ಅನುಭವಿಸಿದರು. ಫಿಸಿಯೊ ಕಮಲೇಶ್ ಜೈನ್ ಜೊತೆ ಆಡುತ್ತಿದ್ದ ಪಾಂಡ್ಯ ಕೂಡ ಧಾವಿಸಿ ಕಿರಿಯ ಆಟಗಾರನ ಕಡೆ ಗಮನ ನೀಡಿದರು. ಆದರೆ ಅದು ಗಂಭೀರವಾಗಿರಲಿಲ್ಲ. ಕೆಲಹೊತ್ತಿನ ನಂತರ ಪಂತ್ ಪ್ಯಾಡ್‌ಕಟ್ಟಿಕೊಂಡು ಆಟಕ್ಕಿಳಿದರು.

ಕೊಹ್ಲಿ ಕೂಡ ಏಕಾಗ್ರತೆಯಿಂದ ಅಭ್ಯಾಸದಲ್ಲಿ ತೊಡಗಿದರು. ನಂತರ ಇತರ ಆಟಗಾರರ ಜೊತೆ ತಮಾಷೆಯ ಮಾತುಗಳನ್ನಾಡಿದರು. ಏಕತಾನತೆ ಕಳೆಯಲು ಸ್ಟ್ರೆಂಥ್‌ ಅಂಡ್ ಕಂಡಿಷನಿಂಗ್‌ ಕೋಚ್‌ ಅವರು ಡ್ರಿಲ್‌ಗಳಲ್ಲಿ ಸ್ವಲ್ಪ ಹೊಸತನ ಅಳವಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.