ಕರಾಚಿ: ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸೋಲು ಕಂಡಿರುವ ಆತಿಥೇಯ ಪಾಕಿಸ್ತಾನ ತಂಡ, ತವರಿನಲ್ಲಿ ನಡೆದ ಪಂದ್ಯದ ಪವರ್ ಪ್ಲೇ ಅವಧಿಯಲ್ಲಿ ಅತಿ ಕಡಿಮೆ ಮೊತ್ತ ಕಲೆಹಾಕಿದ ಅಪಖ್ಯಾತಿಗೂ ಒಳಗಾಗಿದೆ.
ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 320 ರನ್ ಕಲೆಹಾಕಿತ್ತು. ಬೃಹತ್ ಗುರಿ ಬೆನ್ನತ್ತಿದ ಮೊಹಮ್ಮದ್ ರಿಜ್ವಾನ್ ಬಳಗ, ನಿಧಾನಗತಿಯ ಆರಂಭ ಕಂಡಿತು.
ಮಿಚೇಲ್ ಸ್ಯಾಟ್ನರ್ ಬಳಗದ ಬಿಗುವಿನ ಬೌಲಿಂಗ್ ದಾಳಿ ಎದುರು ರನ್ ಗಳಿಸಲು ಪರದಾಡಿದ ಆತಿಥೇಯರು, ಮೊದಲ 10 ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಗಳಿಸಿದ್ದು ಕೇವಲ 22 ರನ್. ಇದು, ತವರಿನ ಅಂಗಳದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪಾಕ್ ತಂಡ ಪವರ್ ಪ್ಲೇ ಅವಧಿಯಲ್ಲಿ ಗಳಿಸಿದ ಕನಿಷ್ಠ ಮೊತ್ತವಾಗಿದೆ.
ಈ ಪಂದ್ಯದಲ್ಲಿ ಆತಿಥೇಯ ತಂಡ 60 ರನ್ ಅಂತರದಿಂದ ಸೋಲು ಕಂಡಿತು.
ಪಾಕಿಸ್ತಾನ, 2018ರಲ್ಲಿ ನ್ಯೂಜಿಲೆಂಡ್‌ನ ಸೌತ್ ಐಸ್‌ಲ್ಯಾಂಡ್‌ನ ಡ್ಯುನ್‌ಡಿನ್‌ನಲ್ಲಿ ಆತಿಥೇಯರ ವಿರುದ್ಧ ನಡೆದ ಪಂದ್ಯದ ಮೊದಲ 10 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 9 ರನ್ ಗಳಿಸಿತ್ತು. ಇದು ಪಾಕ್ ಪಡೆ ಪವರ್ ಪ್ಲೇ ವೇಳೆ ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ.
2013ರಲ್ಲಿ ದಕ್ಷಿಣ ಆಫ್ರಿಕಾ ಎದುರು ಶಾರ್ಜಾದಲ್ಲಿ ನಡೆದ ಪಂದ್ಯದ ಪವರ್ ಪ್ಲೇ ಆಟದಲ್ಲಿ ಕೇವಲ 16 ರನ್ ಗಳಿಸಿತ್ತು. ಆ ಪಂದ್ಯ ಸಹ ಪಾಕ್ ಆತಿಥ್ಯದಲ್ಲೇ ನಡೆದಿತ್ತು.
ಆತಿಥ್ಯ ವಹಿಸಿದ ಪಂದ್ಯದ ಪವರ್ ಪ್ಲೇ ಆಟದಲ್ಲಿ ಪಾಕ್ ಪಡೆಯ ಕನಿಷ್ಠ ಮೊತ್ತ
16 ರನ್ vs ದಕ್ಷಿಣ ಆಫ್ರಿಖಾ, ಶಾರ್ಜಾ (2013)
19 ರನ್ vs ನ್ಯೂಜಿಲೆಂಡ್, ಅಬುಧಾಬಿ (2015)
21 ರನ್ vs ಆಸ್ಟ್ರೇಲಿಯಾ, ಅಬುಧಾಬಿ (2019)
22 ರನ್ vs ನ್ಯೂಜಿಲೆಂಡ್, ಕರಾಚಿ (2025)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.