ADVERTISEMENT

ಪ್ರಧಾನಿ ಮೋದಿ, ಪಾಕ್‌ನ ಶೋಯೆಬ್ ಅಖ್ತರ್ ಸೇರಿ ಭಾರತ ತಂಡಕ್ಕೆ ಪ್ರಶಂಸೆಯ ಮಹಾಪೂರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2025, 5:01 IST
Last Updated 10 ಮಾರ್ಚ್ 2025, 5:01 IST
Venugopala K.
   Venugopala K.

ದುಬೈ: ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿದ ಭಾರತ ತಂಡಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಸಿನಿ ತಾರೆಯರು, ಮಾಜಿ ಕ್ರಿಕೆಟಿಗರು, ಪಾಕಿಸ್ತಾನದ ಕ್ರಿಕೆಟಿಗರು ಸಹ ಕೊಂಡಾಡಿದ್ದಾರೆ.

ಅಸಾಧಾರಣ ಆಟ ಮತ್ತು ಅಸಾಧಾರಣ ಫಲಿತಾಂಶ! ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಕ್ಸ್ ‍ಓಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತಕ್ಕೆ ತಂದ ನಮ್ಮ ಕ್ರಿಕೆಟ್ ತಂಡದ ಬಗ್ಗೆ ಹೆಮ್ಮೆಯಿದೆ. ಅವರು ಪಂದ್ಯಾವಳಿಯಾದ್ಯಂತ ಅದ್ಭುತವಾಗಿ ಆಡಿದ್ದಾರೆ. ಅದ್ಭುತ ಸರ್ವತೋಮುಖ ಪ್ರದರ್ಶನಕ್ಕಾಗಿ ನಮ್ಮ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ADVERTISEMENT

ಅದ್ಭುತ ಗೆಲುವು, ಬಾಯ್ಸ್‌! ನಿಮ್ಮಲ್ಲಿ ಪ್ರತಿಯೊಬ್ಬರೂ ಕೋಟ್ಯಂತರ ಹೃದಯಗಳನ್ನು ಹೆಮ್ಮೆಯಿಂದ ತುಂಬಿಸಿದ್ದೀರಿ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅದ್ಭುತ ವೈಯಕ್ತಿಕ ಪ್ರದರ್ಶನಗಳು ಮತ್ತು ಮೈದಾನದಲ್ಲಿ ಸಂಪೂರ್ಣ ಪ್ರಾಬಲ್ಯದಿಂದ ಗುರುತಿಸಲ್ಪಟ್ಟ ಟೂರ್ನಮೆಂಟ್‌ನಲ್ಲಿ ಟೀಮ್‌ಇಂಡಿಯಾದ ಅದ್ಭುತ ಪಯಣವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಅಭಿನಂದನೆಗಳು, ಚಾಂಪಿಯನ್‌ಗಳೇ ಎಂದೂ ತಿಳಿಸಿದ್ದಾರೆ.

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಸಹ ಭಾರತವನ್ನು ಹಾಡಿ ಹೊಗಳಿದ್ದಾರೆ. ಭಾರತಕ್ಕೆ ಅರ್ಹ ಗೆಲುವು ಸಿಕ್ಕಿದೆ. ಕಳೆದ ವರ್ಷ ಟಿ–20 ವಿಶ್ವಕಪ್, ಈ ವರ್ಷ ಚಾಂಪಿಯನ್ಸ್ ಟ್ರೋಫಿ ಗೆದ್ದು ಭಾರತ ತಂಡ ಕಮಾಲ್ ಮಾಡಿದೆ. ಕೊಹ್ಲಿ, ರೋಹಿತ್ ಫಾರ್ಮ್‌ಗೆ ಮರಳಿದ್ದು, ಅದ್ಭುತ ಪ್ರದರ್ಶನ ಬಂದಿದೆ ಎಂದು ಹೇಳಿದ್ದಾರೆ.

‘ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು... ನೀವು ಅತ್ಯುತ್ತಮರು ಎಂದು ನಮಗೆ ತಿಳಿದಿರುವುದರಿಂದ ನೀವು ಕಪ್ ಗೆಲ್ಲುತ್ತೀರಿ ಎಂದು ನಮಗೆ ತಿಳಿದಿತ್ತು. ಪ್ರತಿಯೊಬ್ಬ ಆಟಗಾರನಿಗೂ ಅಭಿನಂದನೆಗಳು. ನನ್ನ ಹೃದಯಾಂತರಾಳದಿಂದ ನಿಮ್ಮನ್ನು ವಂದಿಸುತ್ತೇನೆ. ನೀವು ನಿಜವಾದ ಚಾಂಪಿಯನ್‌ಗಳಾಗಿರುವುದರಿಂದ ಈ ಗೆಲುವು ಸಾಧಿಸಿದ್ದೀರಿ. ಇದು ಮುಂಬರುವ ಉತ್ತಮ ವರ್ಷದ ಆರಂಭ ಮಾತ್ರ’ಎಂದು ನಟ ಸೋನು ಸೂದ್ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಮಾಜಿ ಕ್ರಿಕೆಟಿಗ ಮೈದಾನದಲ್ಲಿ ಕುಣಿದು ಸಂಭ್ರಮಾಚರಣೆ ಮಾಡಿದ್ದಾರೆ.

https://twitter.com/BattaKashmiri/status/1898792311640993792

ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದು, ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ. ಜನರು ಪ್ರತಿಯೊಂದು ಬೀದಿಯಲ್ಲಿಯೂ ಸಂಭ್ರಮ ಆಚರಿಸುತ್ತಿದ್ದಾರೆ. ನಾನು ಎಲ್ಲ ಆಟಗಾರರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಾಲಿವುಡ್ ಚಿತ್ರ ನಿರ್ದೆಶಕ ಸುಭಾಶ್ ಘಾಯ್ ಹೇಳಿದ್ದಾರೆ.

ಎಂತಹ ಆಟ ಮತ್ತು ಎಂತಹ ಫೈನಲ್! ಚಾಂಪಿಯನ್ಸ್ ಟ್ರೋಫಿ ಮನೆಗೆ ಬಂದಿದೆ. ಹಿಟ್‌ಮ್ಯಾನ್‌ನಿಂದ ಅತ್ಯುತ್ತಮ ನಾಯಕತ್ವ. ಪಂದ್ಯಾವಳಿಯಾದ್ಯಂತ ಮುಂಚೂಣಿಯಿಂದ ಮುನ್ನಡೆಸಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೊಗಳಿದ್ದಾರೆ. ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ ಬೌಲಿಂಗ್ ಕೌಶಲ್ಯವನ್ನೂ ಹೊಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.