ADVERTISEMENT

ಒಂದು ತಂಡಕ್ಕೋಸ್ಕರ ನಿಯಮ ಬದಲು ಸಲ್ಲ: ರಣತುಂಗ ಆಕ್ರೋಶ

ಎಸಿಸಿ ವಿರುದ್ಧ ಲಂಕಾ ದಿಗ್ಗಜ ರಣತುಂಗ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 14:41 IST
Last Updated 15 ಸೆಪ್ಟೆಂಬರ್ 2023, 14:41 IST
ಅರ್ಜುನ ರಣತುಂಗ, ಶ್ರೀಲಂಕಾ ಮಾಜಿ ಕ್ರಿಕೆಟಿಗ
ಅರ್ಜುನ ರಣತುಂಗ, ಶ್ರೀಲಂಕಾ ಮಾಜಿ ಕ್ರಿಕೆಟಿಗ   

ಕೊಲಂಬೊ (ಪಿಟಿಐ): ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್ ಫೋರ್‌ನಲ್ಲಿ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿ ಮಾಡಿದ್ದ ನಿರ್ಧಾರದ ವಿರುದ್ಧ ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ಶುಕ್ರವಾರ ಕೆಂಡಾಮಂಡಲವಾಗಿದ್ದಾರೆ. ಒಂದು ತಂಡಕ್ಕೆ ಮಾತ್ರ ಅನುಕೂಲ ಮಾಡಿಕೊಡುವ ಕ್ರಮ ಕ್ರಿಕೆಟ್‌ನ ಅವಸಾನಕ್ಕೆ ಕಾರಣವಾಗಬಹುದು ಎಂದಿದ್ದಾರೆ.

ಪ್ರತಿಕೂಲ ಹವಾಮಾನದ ಕಾರಣ ನೀಡಿ, ಭಾರತ–ಪಾಕ್ ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಿದ ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಕ್ರಮ ಕೆಲವು ಮಾಜಿ ಆಟಗಾರರ ಹುಬ್ಬೇರಿಸಿತ್ತು.

‘ಟೂರ್ನಿಗೆ ಮೊದಲೇ ನಿಯಮಗಳನ್ನು ರೂಪಿಸಲಾಗಿರುತ್ತದೆ. ಆದರೆ ಆ ಒಂದು ಪಂದ್ಯಕ್ಕೆ (ಭಾರತ–ಪಾಕಿಸ್ತಾನ) ಮುನ್ನ ಅವರು ನಿಯಮ ಬದಲಾಯಿಸಿದರು. ಎಸಿಸಿ ಎಲ್ಲಿದೆ? ಐಸಿಸಿ ಎಲ್ಲಿದೆ?’ ಎಂದು ಆಯ್ದ ಮಾಧ್ಯಮಗಳ ಜೊತೆ ಸಂವಾದದ ವೇಳೆ ರಣತುಂಗ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಒಂದು ಅಥವಾ ಎರಡು ತಂಡಗಳ ಅನುಕೂಲಕ್ಕೆ ನಿಯಮ ಬದಲಾಯಿಸುವುದು ಈ ಆಟವನ್ನು ಅಪಾಯಕ್ಕೆ ಈಡುಮಾಡುತ್ತದೆ ಎಂದು 1996ರ ಲಂಕಾ ವಿಶ್ವಕಪ್ ವಿಜೇತ ತಂಡದ ನಾಯಕ ಹೇಳಿದರು.

‘ಐಸಿಸಿ ಮತ್ತು ಎಸಿಸಿ ಬಗ್ಗೆ ನನಗೆ ಅನುಕಂಪವಿದೆ. ಅವರು ತಮ್ಮ ಸ್ಥಾನ ಉಳಿಸಿಕೊಳ್ಳುವುದರ ಕಡೆಗೇ ಗಮನನೀಡುತ್ತಾರೆ. ಮಾಜಿ ಆಟಗಾರರೂ ಸ್ಥಾನಮಾನದ ನಿರೀಕ್ಷೆಯಿಂದ ಧ್ವನಿಯೆತ್ತುವುದಿಲ್ಲ’ ಎಂದು ಟೀಕಿಸಿದರು.‌

ವ್ಯಂಗ್ಯ:

‘ವಿಶ್ವಕಪ್‌ನಲ್ಲಿ ಭಾರತ– ಪಾಕಿಸ್ತಾನ ಪಂದ್ಯಕ್ಕೆ ಒಂದು ದಿನ ಇರುವಾಗ ನಿಯಮ ಬದಲಾಯಿಸಿದರೂ ನನಗೇನೂ ಅಚ್ಚರಿಯಾಗದು. ಐಸಿಸಿ ಬಾಯಿಮುಚ್ಚಿಕೊಂಡು ತಲೆಯಾಡಿಸುತ್ತದೆ’ ಎಂದು ವ್ಯಂಗ್ಯವಾಡಿದರು.

ಕೊಲಂಬೊದಲ್ಲಿ ಮಳೆಯ ಮುನ್ಸೂಚನೆಯಿದ್ದರೂ ಹಂಬನ್ತೋಟದಂಥ ಕ್ರೀಡಾಂಗಣದಲ್ಲಿ ಸೂಪರ್‌ ಫೋರ್ ಪಂದ್ಯ ಆಡಿಸುವ ಕಡೆ ಎಸಿಸಿ ಲಕ್ಷ್ಯವನ್ನೇ ನೀಡಲಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.