ADVERTISEMENT

‘ಪ್ಲೇ ಆಫ್‌’ ಕನಸಿನಲ್ಲಿ ಧೋನಿ ಪಡೆ

ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಹೋರಾಟ

ಪಿಟಿಐ
Published 22 ಏಪ್ರಿಲ್ 2019, 19:45 IST
Last Updated 22 ಏಪ್ರಿಲ್ 2019, 19:45 IST
ಕೋಲ್ಕತ್ತ ನೈಟ್‌ರೈಡರ್ಸ್‌ ಎದುರಿನ ಭಾನುವಾರದ ಪಂದ್ಯದಲ್ಲಿ ಗೆದ್ದ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಡೇವಿಡ್‌ ವಾರ್ನರ್‌ ಮಗಳ ಜೊತೆ ಆಟವಾಡಿದ ಕ್ಷಣ –ಪಿಟಿಐ ಚಿತ್ರ
ಕೋಲ್ಕತ್ತ ನೈಟ್‌ರೈಡರ್ಸ್‌ ಎದುರಿನ ಭಾನುವಾರದ ಪಂದ್ಯದಲ್ಲಿ ಗೆದ್ದ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಡೇವಿಡ್‌ ವಾರ್ನರ್‌ ಮಗಳ ಜೊತೆ ಆಟವಾಡಿದ ಕ್ಷಣ –ಪಿಟಿಐ ಚಿತ್ರ   

ಚೆನ್ನೈ: ತವರಿನ ಹೊರಗೆ ಆಡಿದ ಹಿಂದಿನ ಎರಡು ಪಂದ್ಯಗಳಲ್ಲೂ ಸೋತಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಈಗ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.

ಚೆಪಾಕ್‌ ಅಂಗಳದಲ್ಲಿ ಮಂಗಳವಾರ ನಡೆಯುವ ಹಣಾಹಣಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಬಳಗ, ಸನ್‌ರೈಸರ್ಸ್‌ ಹೈದರಾಬಾದ್‌ ಸವಾಲು ಎದುರಿಸಲಿದೆ. ಚೆನ್ನೈ ತಂಡ ಈ ಪಂದ್ಯದಲ್ಲಿ ಗೆದ್ದು ‘ಪ್ಲೇ ಆಫ್‌’ ಸ್ಥಾನ ಖಚಿತಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಹಣಾಹಣಿಯಲ್ಲಿ ಚೆನ್ನೈ, ಕೇವಲ ಒಂದು ರನ್‌ನಿಂದ ಸೋತಿತ್ತು. ನಾಯಕ ಧೋನಿ ಅವರ ಛಲದ ಆಟ ಮನ ಸೆಳೆದಿತ್ತು.

ADVERTISEMENT

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಶೇನ್‌ ವಾಟ್ಸನ್‌, ಅಂಬಟಿ ರಾಯುಡು ಮತ್ತು ಸುರೇಶ್‌ ರೈನಾ ಅವರ ವೈಫಲ್ಯ ‘ಮಹಿ’ ಚಿಂತೆಗೆ ಕಾರಣವಾಗಿದೆ. ಇವರು ಈ ಸಲದ ಲೀಗ್‌ನಲ್ಲಿ ಕ್ರಮವಾಗಿ 147, 192 ಮತ್ತು 207ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಕೇದಾರ್‌ ಜಾಧವ್‌ ಮತ್ತು ರವೀಂದ್ರ ಜಡೇಜ ಕೂಡಾ ರನ್‌ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಧೋನಿ ಮತ್ತು ಫಾಫ್‌ ಡು ಪ್ಲೆಸಿ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.

ಧೋನಿ, ಒಂಬತ್ತು ಪಂದ್ಯಗಳಿಂದ 314ರನ್‌ ದಾಖಲಿಸಿದ್ದಾರೆ. ಆರು ಪಂದ್ಯಗಳನ್ನು ಆಡಿರುವ ಪ್ಲೆಸಿ 178ರನ್‌ ಬಾರಿಸಿದ್ದಾರೆ. ಉತ್ತಮ ಲಯದಲ್ಲಿರುವ ಇವರು ಚೆಪಾಕ್‌ ಅಂಗಳದಲ್ಲಿ ರನ್‌ ಮಳೆ ಸುರಿಸಲು ಸನ್ನದ್ಧರಾಗಿದ್ದಾರೆ.

ಚೆನ್ನೈ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ದೀ‍ಪಕ್‌ ಚಾಹರ್ ಮತ್ತು ಇಮ್ರಾನ್‌ ತಾಹಿರ್‌ ಮಿಂಚುತ್ತಿದ್ದಾರೆ. ವೇಗದ ಬೌಲರ್‌ ದೀಪಕ್‌, ಖಾತೆಯಲ್ಲಿ 13 ವಿಕೆಟ್‌ಗಳಿವೆ. ಅವರು ಅತಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ತಾಹಿರ್‌ 16 ವಿಕೆಟ್‌ ಕಬಳಿಸಿದ್ದು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಇವರು ಸನ್‌ರೈಸರ್ಸ್‌ ತಂಡದ ಡೇವಿಡ್‌ ವಾರ್ನರ್‌ ಮತ್ತು ಜಾನಿ ಬೇಸ್ಟೊ ಅವರನ್ನು ಕಟ್ಟಿಹಾಕಲು ಯಾವ ಬಗೆಯ ರಣನೀತಿ ಹೆಣೆದು ಅಂಗಳಕ್ಕಿಳಿಯುತ್ತಾರೆ ಎಂಬುದು ಸದ್ಯದ ಕುತೂಹಲ.

ಭಾನುವಾರದ ಹೋರಾಟದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ ಎದುರು ಗೆದ್ದಿದ್ದ ಸನ್‌ರೈಸರ್ಸ್‌, ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಕೇನ್‌ ವಿಲಿಯಮ್ಸನ್‌ ಪಡೆ, ಈ ಪಂದ್ಯದಲ್ಲಿ ಗೆದ್ದು ‘ಪ್ಲೇ ಆಫ್’ ಹಾದಿ ಸುಗಮ ಮಾಡಿಕೊಳ್ಳಲು ಕಾತರಿಸುತ್ತಿದೆ.

ಆರಂಭಿಕರಾದ ವಾರ್ನರ್‌ ಮತ್ತು ಬೇಸ್ಟೊ ಈ ತಂಡದ ಆಧಾರಸ್ಥಂಭಗಳಾಗಿದ್ದಾರೆ.

ಆಸ್ಟ್ರೇಲಿಯಾದ ವಾರ್ನರ್‌, ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಂಬತ್ತು ಪಂದ್ಯಗಳಿಂದ 517ರನ್‌ ಕಲೆಹಾಕಿದ್ದಾರೆ. ಇಂಗ್ಲೆಂಡ್‌ನ ಬೇಸ್ಟೊ ಖಾತೆಯಲ್ಲಿ 445ರನ್‌ಗಳಿವೆ.

ನಾಯಕ ವಿಲಿಯಮ್ಸನ್‌, ಮನೀಷ್‌ ಪಾಂಡೆ, ದೀಪಕ್‌ ಹೂಡಾ ಮತ್ತು ವಿಜಯಶಂಕರ್‌ ಅವರು ರನ್ ಬರ ಎದುರಿಸುತ್ತಿದ್ದಾರೆ. ಇದು ತಂಡದ ಚಿಂತೆಗೆ ಕಾರಣವಾಗಿದೆ. ಮಂಗಳವಾರದ ಪಂದ್ಯದಲ್ಲಿ ಇವರು ಲಯ ಕಂಡುಕೊಂಡರೇ ಚೆನ್ನೈ ತಂಡವನ್ನು ಅದರದ್ದೇ ನೆಲದಲ್ಲಿ ಕಟ್ಟಿಹಾಕುವ ಈ ತಂಡದ ಕನಸು ಸಾಕಾರಗೊಳ್ಳಬಹುದು.

ಭುವನೇಶ್ವರ್‌ ಕುಮಾರ್‌, ಸಿದ್ಧಾರ್ಥ್‌ ಕೌಲ್ ಮತ್ತು ಖಲೀಲ್ ಅಹ್ಮದ್‌ ಅವರು ಬೌಲಿಂಗ್‌ನಲ್ಲಿ ತಂಡದ ಶಕ್ತಿಯಾಗಿದ್ದಾರೆ. ರಶೀದ್‌ ಖಾನ್‌ ಮತ್ತು ಮೊಹಮ್ಮದ್‌ ನಬಿ ಅವರ ಬಲವೂ ಸನ್‌ರೈಸರ್ಸ್‌ಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.