ಚೇತೇಶ್ವರ ಪೂಜಾರ
(ಪಿಟಿಐ ಚಿತ್ರ)
ರಾಜ್‌ಕೋಟ್: 'ಯಾವುದೇ ವಿಷಾದವಿಲ್ಲ. ಭಾರತ ತಂಡಕ್ಕಾಗಿ ಇಷ್ಟು ದೀರ್ಘ ಕಾಲ ಆಡಿದ್ದು ನನ್ನ ಅದೃಷ್ಟ. ಹೆಚ್ಚಿನ ಆಟಗಾರರಿಗೆ ಅಂತಹ ಅವಕಾಶ ಸಿಗುವುದಿಲ್ಲ. ಹಾಗಾಗಿ ನನ್ನ ಕುಟುಂಬ ಹಾಗೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ತುಂಬಾ ಕೃತಜ್ಞನಾಗಿದ್ದೇನೆ' ಎಂದು ನಿವೃತ್ತಿಯ ಬಳಿಕ ಚೇತೇಶ್ವರ ಪೂಜಾರ ಪ್ರತಿಕ್ರಿಸಿದ್ದಾರೆ.
37 ವರ್ಷದ ಪೂಜಾರ, ಎಲ್ಲ ಮಾದರಿಯ ಕ್ರಿಕೆಟ್‌ಗೆ ಇಂದು (ಭಾನುವಾರ) ನಿವೃತ್ತಿ ಘೋಷಿಸಿದ್ದಾರೆ.
ಟೆಸ್ಟ್ ಪರಿಣಿತ ಖ್ಯಾತಿಯ ಕಲಾತ್ಮಕ ಬ್ಯಾಟರ್ ಪೂಜಾರ ಅವರಿಗೆ ಕಳೆದ ಎರಡು ವರ್ಷಗಳಿಂದ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ.
'ನನ್ನ ಆಟವನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಆದರೆ ಕ್ರಿಕೆಟ್ ಜೊತೆಗಿನ ನಂಟು ಮುಂದುವರಿಯಲಿದೆ. ಕಾಮೆಂಟರಿ, ಮಾಧ್ಯಮ ಕೆಲಸ ಸೇರಿದಂತೆ ಕ್ರಿಕೆಟ್ ಜೊತೆಗಿನ ಪಯಣ ಮುಂದುವರಿಸುತ್ತೇನೆ. ನಾನು ಕ್ರಿಕೆಟ್ ಆಡದಿರಬಹುದು. ಆದರೆ ಟೀಮ್ ಇಂಡಿಯಾದ ಆಟವನ್ನು ವೀಕ್ಷಿಸುತ್ತಾ ಕಾಮೆಂಟರಿ ಮಾಡಲಿದ್ದೇನೆ' ಎಂದು ಭವಿಷ್ಯದ ಯೋಜನೆಯ ಕುರಿತು ವಿವರಿಸಿದ್ದಾರೆ.
2010ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪೂಜಾರ 2012ರಲ್ಲಿ ರಾಹುಲ್ ದ್ರಾವಿಡ್ ನಿವೃತ್ತಿಯ ಬಳಿಕ ಮೂರನೇ ಕ್ರಮಾಂಕದಲ್ಲಿ ಛಾಪು ಒತ್ತಿದ್ದರು.
2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಶತಕಗಳು ಸೇರಿದಂತೆ 521 ರನ್ ಗಳಿಸಿದ್ದರು. ಅಲ್ಲದೆ 1,258 ಎಸೆತಗಳನ್ನು ಎದುರಿಸಿದ್ದರು.
'ಮೈದಾನದಲ್ಲಿ ಕೆಲವು ಅದ್ಭುತ ಕ್ಷಣಗಳನ್ನು ಕಳೆದಿದ್ದೇನೆ. ಈ ಪೈಕಿ 2018ರ ಆಸ್ಟ್ರೇಲಿಯಾ ನೆಲದಲ್ಲಿನ ಸರಣಿ ನನ್ನ ಕ್ರಿಕೆಟ್ ಜೀವನದ ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಿದೆ. ಇದು ಭಾರತೀಯ ಕ್ರಿಕೆಟ್ ಪಾಲಿಗೂ ಅತ್ಯುತ್ತಮ ನೆನಪುಗಳಲ್ಲಿ ಒಂದಾಗಿದೆ' ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.