ADVERTISEMENT

ಮೂರು ತಿಂಗಳ ಬಳಿಕ ಅಭ್ಯಾಸ ಕಣಕ್ಕೆ ಇಳಿದ ಚೇತೇಶ್ವರ ಪೂಜಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 14:55 IST
Last Updated 22 ಜೂನ್ 2020, 14:55 IST
ಚೇತೇಶ್ವರ ಪೂಜಾರ –ಪಿಟಿಐ ಚಿತ್ರ
ಚೇತೇಶ್ವರ ಪೂಜಾರ –ಪಿಟಿಐ ಚಿತ್ರ   

ನವದೆಹಲಿ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಸೌರಾಷ್ಟ್ರ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಲಾತ್ಮಕ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಮತ್ತು ಎಡಗೈ ವೇಗದ ಬೌಲರ್, ನಾಯಕ ಜಯದೇವ ಉನದ್ಕತ್ ಸೋಮವಾರ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು.

ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ನಂತರ ಅವರು ಅಭ್ಯಾಸ ಮಾಡಿದ್ದು ಇದೇ ಮೊದಲು. ಮೂರು ತಿಂಗಳು ‘ಗೃಹಬಂಧನ’ದಲ್ಲಿದ್ದ ಪೂಜಾರ ರಾಜ್‌ಕೋಟ್‌ನ ಹೊರವಲಯದಲ್ಲಿರುವ ಅಕಾಡೆಮಿಯಲ್ಲಿನ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಉನದ್ಕತ್, ಬ್ಯಾಟ್ಸ್‌ಮನ್ ಅರ್ಪಿತ್ ವಾಸವ್ಡ ಮತ್ತು ಮಧ್ಯಮ ವೇಗಿ ಪ್ರೇರಕ್ ಮಂಕಡ್ ಕೂಡ ಅವರೊಂದಿಗೆ ‘ಕಣಕ್ಕೆ’ ಇಳಿದರು.

‘ಲಾಕ್‌ಡೌನ್ ಅವಧಿಯಲ್ಲಿ ಫಿಟ್‌ನೆಸ್‌ಗೆ ಸಂಬಂಧಿಸಿದ ವ್ಯಾಯಾಮವನ್ನು ಮನೆಯಲ್ಲೇ ಮಾಡುತ್ತಿದ್ದೆವು. ಆದರೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವುದಕ್ಕೆ ಯಾವುದೂ ಪರ್ಯಾಯವಲ್ಲ. ಸರ್ಕಾರದ ಮಾನದಂಡಗಳೆಲ್ಲವನ್ನೂ ಪಾಲಿಸಿಕೊಂಡು ನೆಟ್ಸ್‌ಗೆ ಇಳಿದಿದ್ದೇವೆ’ ಎಂದು ರಣಜಿ ಟ್ರೋಫಿ ಫೈನಲ್‌ನ ಪಂದ್ಯಶ್ರೇಷ್ಠ ಆಟಗಾರ ಅರ್ಪಿತ್ ಹೇಳಿದರು.

ADVERTISEMENT

ಇತರ ಆಟಗಾರರಿಗೆ ಫಿಟ್‌ನೆಸ್ ಕಾಯ್ದುಕೊಳ್ಳಲು ನಾಲ್ಕರಿಂದ ಆರು ವಾರಗಳು ಸಾಕಾಗಬಹುದು. ಆದರೆ ಸುದೀರ್ಘ ಅವಧಿಯ ನಂತರ ಕಣಕ್ಕೆ ಇಳಿಯುವ ಬೌಲರ್‌ಗಳಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಜಯದೇವ ಉನದ್ಕತ್ ಬಗ್ಗೆ ಕೇಳಿದಾಗ ‘ಜೆಡಿ ಭಾಯ್ (ಉನದ್ಕತ್) ಈಚೆಗೆ ಅಭ್ಯಾಸ ಆರಂಭಿಸಿದ್ದಾರೆ. ನಿಧಾನಕ್ಕೆ ಲಯ ಕಂಡುಕೊಳ್ಳುತ್ತಿದ್ದಾರೆ’ ಎಂದು ಅರ್ಪಿತ್ ತಿಳಿಸಿದರು.

‘ನಾನು ಮತ್ತು ಪೂಜಾರ 10ರಿಂದ 15 ನಿಮಿಷ ಬ್ಯಾಟಿಂಗ್ ಮಾಡಿದೆವು. ಸ್ಥಳೀಯ ಆಟಗಾರರು‌ ನಮಗಾಗಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದರು. ನಮ್ಮ ಬ್ಯಾಟಿಂಗ್ ಚುರುಕು ಪಡೆದುಕೊಳ್ಳುತ್ತಿದೆ. ಎಲ್ಲವೂ ಸರಿಹೋಗಬೇಕಾದರೆ ಸ್ವಲ್ಪ ಕಾಲ ಬೇಕಾಗಬಹುದು’ ಎಂದರು.

ಪೂಜಾರ ಒಳಗೊಂಡಂತೆ ರಾಷ್ಟ್ರೀಯ ತಂಡದ ಆಟಗಾರರ ಈ ಋತುವಿನ ಭವಿಷ್ಯದ ಬಗ್ಗೆ ಸ್ಪಷ್ಟವಾಗಿ ಏನೂ ಗೊತ್ತಾಗಲಿಲ್ಲ. ಆದರೂ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ನಡೆಯುವ ಸಾಧ್ಯತೆ ಇದೆ. ಇಂಥ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಪೂಜಾರ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಚಿತ್ರವನ್ನು ಸೋಮವಾರ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

‘ಮತ್ತೆ ಅಂಗಣಕ್ಕೆ ಇಳಿದಿದ್ದೇನೆ. ಇಲ್ಲಿಗೆ ಬರುವ ಮುನ್ನ ಸುದೀರ್ಘ ಕಾಲ ದೂರ ಉಳಿದಂತೆ ಅನಿಸುತ್ತಿತ್ತು. ಆದರೆ ಈಗ ನಿನ್ನೆ–ಮೊನ್ನೆ ಕೊನೆಯದಾಗಿ ಆಡಿದಂತೆ ಭಾಸವಾಗುತ್ತಿದೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಚಿತ್ರದೊಂದಿಗೆ ಅವರ ಒಕ್ಕಣೆ ಇದೆ.

ಭಾರತದ ಇತರ ನಗರಗಳಿಗೆ ಹೋಲಿಸಿದರೆ ರಾಜ್‌ಕೋಟ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ. ಇಲ್ಲಿ ಈ ವರೆಗೆ 185 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.