ADVERTISEMENT

ಬಿಸಿಸಿಐ–ಭಾರತಕ್ಕೆ ಲಾಭ: ಅರುಣ್

ಐಪಿಎಲ್‌ ಟ್ವೆಂಟಿ–20 ಕ್ರಿಕೆಟ್ ಟೂರ್ನಿಗೆ ಚೀನಾ ಮೊಬೈಲ್ ಕಂಪೆನಿಯ ಪ್ರಾಯೋಜಕತ್ವ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 22:30 IST
Last Updated 18 ಜೂನ್ 2020, 22:30 IST
ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ   

ನವದೆಹಲಿ (ಪಿಟಿಐ): ಈ ವರ್ಷ ಪ್ರಾಯೋಜಕತ್ವ ನೀತಿಯಲ್ಲಿ ಬದಲಾವಣೆ ಮಾಡುವುದಿಲ್ಲ. ಮುಂದಿನ ಹಂತದಲ್ಲಿ ಯೋಚಿಸಲಾಗುವುದು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಮುಖ ಪ್ರಾಯೋಜಕತ್ವ ಹೊಂದಿರುವ ಚೀನಾದ ಕಂಪೆನಿಯೊಂದಿಗೆ ಒಪ್ಪಂದ ಮುಂದುವರಿಯಲಿದೆ. ಅದರಿಂದ ನಮಗೇ ಲಾಭ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.

ಗಡಿಯಲ್ಲಿ ಭಾರತ–ಚೀನಾ ಯೋಧರ ಸಂಘರ್ಷ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಹೆಚ್ಚುತ್ತಿದೆ.

ಐಪಿಎಲ್‌ಗೆ ಪ್ರಾಯೋಜಕತ್ವ ನೀಡಿರುವ ವಿವೊ ಮೊಬೈಲ್ ಚೀನಾ ದ ಕಂಪೆನಿಯಾಗಿದೆ. ಇದರಿಂದ ಪ್ರತಿ ವರ್ಷ ₹ 440 ಕೋಟಿ ಆದಾಯ ಬಿಸಿಸಿಐಗೆ ಬರುತ್ತಿದೆ. 2022ರವರೆಗೂ ಮಂಡಳಿ ಒಪ್ಪಂದ ಮಾಡಿ ಕೊಂಡಿದೆ. ‘ಮಂಡಳಿಗೆ ಇದು ಪ್ರಮುಖ ಆದಾಯವಾಗಿದೆ. ಇದರಿಂದ ದೇಶಕ್ಕೆ ಪ್ರಯೋಜನವಾಗುತ್ತಿದೆ’ ಎಂದಿದ್ದಾರೆ.

ADVERTISEMENT

‘ಭಾರತದಲ್ಲಿ ಚೀನಾ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದೆ. ಇಲ್ಲಿಯ ಗ್ರಾಹಕರಿಂದ ಲಾಭ ಪಡೆಯುತ್ತದೆ. ಆ ಉತ್ಪನ್ನದ ಪ್ರಚಾರಕ್ಕಾಗಿ ವೇದಿಕೆ ಒದಗಿಸಲು ಬಿಸಿ ಸಿಐಗೆ ಪ್ರಾಯೋಜಕತ್ವದ ರೂಪದಲ್ಲಿ ದುಡ್ಡು ನೀಡುತ್ತದೆ. ನಾವು ಪಡೆ ಯುವ ಆ ಹಣದ ಶೇ 42ರಷ್ಟು ತೆರಿಗೆ ಯನ್ನು ಭಾರತ ಸರ್ಕಾರಕ್ಕೆ ಪಾವ ತಿಸುತ್ತೇವೆ. ಆದ್ದರಿಂದ ಇದು ನಮ್ಮ ದೇಶಕ್ಕೆ ಲಾಭ, ಚೀನಾಕ್ಕಲ್ಲ’ ಎಂದರು.

ಭಾರತ ಕ್ರಿಕೆಟ್ ತಂಡಕ್ಕೆ ಪ್ರಾಯೋ ಜಕತ್ವ ನೀಡುತ್ತಿದ್ದ ಚೀನಾದ ಒಪ್ಪೊ ಮೊಬೈಲ್ ಕಂಪೆನಿಯೊಂದಿಗಿನ ಒಪ್ಪಂದವನ್ನು ಹೋದ ಸೆಪ್ಟೆಂಬರ್‌ನಲ್ಲಿ ಬಿಸಿಸಿಐ ಕೊನೆಗೊಳಿಸಿತ್ತು. ಬೆಂಗಳೂರು ಮೂಲದ ಬೈಜುಸ್ ಶೈಕ್ಷಣಿಕ ತಂತ್ರಜ್ಞಾನ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

‘ಎಲ್ಲಿಯವರೆಗೆ ಚೀನಾ ಕಂಪೆನಿಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಭಾರತದಲ್ಲಿ ಅವಕಾಶವಿದೆಯೋ ಅಲ್ಲಿ ಯವರೆಗೆ ಪ್ರಾಯೋಜಕತ್ವ ಪಡೆದರೆ ತಪ್ಪಿಲ್ಲ. ಒಂದೊಮ್ಮೆ ಅವರು ಐಪಿಎಲ್ ಪ್ರಾಯೋಜಿಸದೇ ತಮ್ಮ ಹಣವನ್ನು ಮರಳಿ ತೆಗೆದುಕೊಂಡರೆ ಅವರಿಗೇ ಹೆಚ್ಚು ಲಾಭ. ಆದರೆ ಆ ಹಣ ಇಲ್ಲಿಯೇ ಉಳಿದರೆ ನಮಗೆ ಒಳ್ಳೆಯದು. ಒಂದೊಮ್ಮೆ ಚೀನಾದ ಕಂಪೆನಿಗೆ ಕ್ರಿಕೆಟ್ ಕ್ರೀಡಾಂಗಣ ಕಟ್ಟುವ ಗುತ್ತಿಗೆ ನೀಡಿದರೆ ಅವರಿಗೆ ನಾವು ಲಾಭ ಮಾಡಿ ಕೊಟ್ಟಂತಾಗುತ್ತದೆ. ಅಹಮದಾಬಾದ್‌ನ ಮೊಟೇರಾದಲ್ಲಿ ಕಟ್ಟಿರುವ ಬೃಹತ್ ಕ್ರೀಡಾಂಗಣದ ನಿರ್ಮಾಣ ಕಾಮಗಾರಿ ಯನ್ನು ಭಾರತದ ಎಲ್‌ ಅ್ಯಂಡ್ ಟಿ ಕಂಪೆನಿಯು ನಿರ್ವಹಿಸಿತ್ತು’ ಎಂದರು.

‘ಬಿಸಿಸಿಐ ಚೀನಾ ಕಂಪೆನಿಗೆ ಅಥವಾ ಆ ದೇಶಕ್ಕೆ ಯಾವುದೇ ಹಣ ನೀಡುತ್ತಿಲ್ಲ. ಭಾರತೀಯ ಮೂಲದ ಕಂಪೆನಿಗಳಿಂದ ಪ್ರಾಯೋಜಕತ್ವ ಪಡೆಯುವುದು ನಮಗೇನೂ ಕಷ್ಟವಲ್ಲ. ಒಟ್ಟಾರೆ ಇಲ್ಲಿಯ ಕ್ರಿಕೆಟ್ ಮತ್ತು ಕ್ರಿಕೆಟಿಗರಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಮಂಡಳಿಯು ಬದ್ಧವಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.