ಕ್ರಿಸ್ ವೋಕ್ಸ್
(ರಾಯಿಟರ್ಸ್ ಚಿತ್ರ)
ಲಂಡನ್: ಭಾರತ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗಾಯದಿಂದಾಗಿ ಒಂಟಿಕೈಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಕ್ರೀಡಾಪ್ರೇಮಿಗಳ ಹೃದಯ ಗೆದ್ದಿರುವ ಇಂಗ್ಲೆಂಡ್ ತಂಡದ ವೇಗದ ಬೌಲರ್ ಕ್ರಿಸ್ ವೋಕ್ಸ್, ನಿರ್ಣಾಯಕ ಪಂದ್ಯದಲ್ಲಿ ಗಾಯದ ನಡುವೆಯೂ ಬ್ಯಾಟಿಂಗ್ ಮಾಡದಿರುವ ಕುರಿತು ಯೋಚಿಸಿರಲಿಲ್ಲ ಎಂದಿದ್ದಾರೆ.
ಪಂದ್ಯದ ಮೊದಲ ದಿನದಾಟದಲ್ಲಿ ವೋಕ್ಸ್ ಫೀಲ್ಡಿಂಗ್ ಮಾಡುವಾಗ ಡೈವ್‌ಮಾಡಿದ್ದಾಗ ಭುಜದ ಮೂಳೆಮುರಿತವಾಗಿತ್ತು. ಬಳಿಕ ಅಂತಿಮ ದಿನದಾಟದಲ್ಲಿ ಎಡಗೈಗೆ ಬ್ಯಾಂಡೆಜ್ ಕಟ್ಟಿಕೊಂಡೇ ಇನ್ನೊಂದು ಕೈಯಲ್ಲಿ ಬ್ಯಾಟ್ ಹಿಡಿದು ಕ್ರೀಸ್‌ಗೆ ಬಂದಿದ್ದರು.
ಕ್ರಿಸ್ ವೋಕ್ಸ್ ಒಂದು ಕೈಗೆ ಬ್ಯಾಂಡೇಜ್ ಕಟ್ಟಿಕೊಂಡೇ ಬ್ಯಾಟ್ ಹಿಡಿದು ಕ್ರೀಸಿಗೆ ಬಂದಿರುವುದು ಅವರ ಆತ್ಮಬಲ ಹಾಗೂ ದಿಟ್ಟತನಕ್ಕೆ ಸಾಕ್ಷಿಯಾಗಿದ್ದು, ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಅಚ್ಚಳಿದಂತೆ ಉಳಿದಿದೆ.
'ಈ ಕುರಿತು ಪ್ರತಿಕ್ರಿಯಿಸಿರುವ ವೋಕ್ಸ್, ಇಂಗ್ಲೆಂಡ್ ತಂಡಕ್ಕಾಗಿ ಬ್ಯಾಟಿಂಗ್ ಮಾಡುವುದು ನನ್ನ ಕರ್ತವ್ಯವಾಗಿತ್ತು. ಅಲ್ಲಿ ಹೋಗಿ ಆಡುವ ವಿಷಯ ಮಾತ್ರ ಆಗಿರಲಿಲ್ಲ. ಅದಕ್ಕಿಂತಲೂ ಮಿಗಿಲಾಗಿತ್ತು' ಎಂದಿದ್ದಾರೆ.
'ತವರಿನ ಅಭಿಮಾನಿಗಳ ಮುಂದೆ ನಿಮ್ಮ ತಂಡದ ಆಟಗಾರರು ಕಠಿಣ ಪರಿಶ್ರಮ ಹಾಗೂ ತ್ಮಾಗವನ್ನು ಮಾಡಿದ್ದಾರೆ. ಅವರಿಗೆಲ್ಲರಿಗಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಬೇಕೆಂಬ ಭಾವನೆ ಮೂಡಿತ್ತು' ಎಂದಿದ್ದಾರೆ.
'ಗೆಲುವು ಗಳಿಸಲು ಸಾಧ್ಯವಾಗದಿರುವುದಕ್ಕೆ ಬೇಸರವಾಗಿದೆ. ಆದರೆ ಗೆಲ್ಲಲೂ 100 ರನ್ ಇದ್ದರೂ ಸಹ ನಾನು ಬ್ಯಾಟಿಂಗ್ ಮಾಡಲು ಹೋಗಲಾರೆ ಎಂದು ಯೋಚಿಸಿರಲಿಲ್ಲ' ಎಂದು ಮನದಾಳದ ಮಾತನ್ನು ಆಡಿದ್ದಾರೆ.
ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿರುವುದು ಖುಷಿ ಕೊಟ್ಟಿತು. ಭಾರತೀಯ ಆಟಗಾರರಿಂದಲೂ ಗೌರವ ದೊರಕಿತು ಎಂದು ವೋಕ್ಸ್ ಹೇಳಿದ್ದಾರೆ.
'ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಹಾಗೂ ಉಪನಾಯಕ ರಿಷಭ್ ಪಂತ್ ನನ್ನನ್ನು ಅಭಿನಂದಿಸಿದರು. ನಿಜಕ್ಕೂ ಧೈರ್ಯಶಾಲಿ ಎಂದು ಗಿಲ್ ಪ್ರಶಂಶಿಸಿದರು. ಪಂತ್ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಸೆಲ್ಯೂಟ್ ಇಮೋಜಿ ಹಂಚಿಕೊಂಡರು. ಅವರ ಪ್ರೀತಿಗಾಗಿಯೂ ಧನ್ಯವಾದ ಹೇಳಿದ್ದೇನೆ. ನನ್ನಿಂದಾಗಿ ಅವರ ಕಾಲಿಗೆ ಗಾಯಗೊಂಡಿದ್ದಕ್ಕೆ ಕ್ಷಮೆ ಕೇಳಿದ್ದೇನೆ' ಎಂದಿದ್ದಾರೆ.
ನಾಲ್ಕನೇ ದಿನದಂದು ಕೋಚ್ ಮಾರ್ಕಸ್ ಟ್ರೆಸ್ಕೊಥಿಕ್ ಮಾರ್ಗದರ್ಶನದಲ್ಲಿ ಒಂಟಿಕೈಯಲ್ಲಿ ಬ್ಯಾಟಿಂಗ್ ಮಾಡಲು ಆರಂಭಿಸಿದ್ದೆ ಎಂದು ವೋಕ್ಸ್ ತಿಳಿಸಿದ್ದಾರೆ.
ಕೊನೆಯ ದಿನ ನಾನ್-ಸ್ಟೈಕರ್‌ನಲ್ಲಿದ್ದ ವೋಕ್ಸ್ ಒಂದೇ ಒಂದು ಎಸೆತವನ್ನು ಎದುರಿಸಿರಲಿಲ್ಲ. ಆದರೆ ರನ್‌ಗಾಗಿ ವಿಕೆಟ್‌ಗಳ ಮಧ್ಯೆ ಓಡುವುದು ಇನ್ನಷ್ಟು ಕಠಿಣವಾಗಿತ್ತು ಎಂದಿದ್ದಾರೆ. ಥಾಂಕ್ಸ್ ಗಾಡ್! ನಾನು ಸ್ಟೈಕರ್‌ನಲ್ಲಿದ್ದರೆ ಗಂಟೆಗೆ 90 ಮೈಲ್ ವೇಗದ ಬೌನ್ಸರ್ ಎದುರಿಸಬೇಕಿತ್ತು. ಅದರಿಂದ ತಪ್ಪಿಸಿಕೊಂಡೆ ಎಂದು ಹೇಳಿದ್ದಾರೆ.
ಅಂತಿಮ ಟೆಸ್ಟ್ ಪಂದ್ಯದಲ್ಲಿಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2ರ ಅಂತರದ ಸಮಬಲ ಸಾಧಿಸಿತ್ತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತಿ ಕಡಿಮೆ ಅಂತರದ ಗೆಲುವಾಗಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಕಿತ್ತ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶುಭಮನ್ ಗಿಲ್, ಕ್ರಿಸ್ ವೋಕ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.