ADVERTISEMENT

ಮಧ್ಯಪ್ರದೇಶಕ್ಕೆ ಸಿದ್ದಾರ್ಥ್‌ ಆಸರೆ

ಸಿ.ಕೆ. ನಾಯ್ಡು ಕ್ರಿಕೆಟ್‌: ನಾಲ್ಕು ವಿಕೆಟ್‌ ಕಬಳಿಸಿದ ಭಾಂಡಗೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 20:15 IST
Last Updated 9 ಜನವರಿ 2019, 20:15 IST
ಹುಬ್ಬಳ್ಳಿಯಲ್ಲಿ ಬುಧವಾರ ಆರಂಭವಾದ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮಧ್ಯಪ್ರದೇಶ ತಂಡದ ಅಶುತೋಷ್‌ ಶರ್ಮಾ ಔಟಾದಾಗ ಕರ್ನಾಟಕದ ಆಟಗಾರರು ಸಂಭ್ರಮಿಸಿದರು–ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯಲ್ಲಿ ಬುಧವಾರ ಆರಂಭವಾದ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮಧ್ಯಪ್ರದೇಶ ತಂಡದ ಅಶುತೋಷ್‌ ಶರ್ಮಾ ಔಟಾದಾಗ ಕರ್ನಾಟಕದ ಆಟಗಾರರು ಸಂಭ್ರಮಿಸಿದರು–ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಆರಂಭದಲ್ಲಿ ರನ್‌ ಗಳಿಸಲು ಪರದಾಡಿದ ಮಧ್ಯಪ್ರದೇಶ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು
ಆಸರೆಯಾದರು. ಇದರಿಂದ ತಂಡ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕರ್ನಾಟಕ ಎದುರಿನ ಪಂದ್ಯದಲ್ಲಿ ಆರಂಭಿಕ ಸಂಕಷ್ಟದಿಂದ ಪಾರಾಯಿತು.

ಇಲ್ಲಿನ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಕರ್ನಾಟಕ ಟಾಸ್‌ ಜಯಿಸಿ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಸಲ್ಮಾನ್‌ ಖಾನ್‌ ನಾಯಕತ್ವದ ಮಧ್ಯಪ್ರದೇಶ ಮೊದಲ ದಿನದಾಟದಲ್ಲಿ 89 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 244 ರನ್‌ ಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ನಿಖಿಲ್‌ ಮಿಶ್ರಾ (8), ಪಾರ್ಥ ಗೋಸ್ವಾಮಿ (35), ಆಶುತೋಷ್‌ ಶರ್ಮಾ (14) ಬೇಗನೆ ಔಟಾದರು. ತಂಡ 59 ರನ್‌ ಗಳಿಸುವಷ್ಟರಲ್ಲಿ ಈ ಮೂವರನ್ನೂ ಕಳೆದುಕೊಂಡಿತ್ತು.

ADVERTISEMENT

ಸಿದ್ದಾರ್ಥ್‌ ಪಾಟೀದಾರ್‌ (65, 100ಎಸೆತ, 11ಬೌಂಡರಿ) ಮತ್ತು ರಾಹುಲ್‌ ಬಾಥಮ್‌ (ಬ್ಯಾಟಿಂಗ್‌ 44, 137 ಎಸೆತ, 3ಬೌಂಡರಿ) ಆರನೇ ವಿಕೆಟ್‌ ಜೊತೆಯಾಟದಲ್ಲಿ ಕರ್ನಾಟಕದ ಬೌಲರ್‌ಗಳನ್ನು ತಾಳ್ಮೆಯಿಂದ ಎದುರಿಸಿದರು. ಈ ಜೋಡಿ 95 ರನ್‌ ಕಲೆಹಾಕಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿತು.

ಮಿಂಚಿದ ದರ್ಶನ್‌: ತಮಿಳುನಾಡು ಎದುರಿನ ಪಂದ್ಯದಲ್ಲಿ ಮನೋಜ ಬಾಂಢಗೆ ನಾಲ್ಕು ವಿಕೆಟ್‌ ಕಬಳಿಸಿದ್ದರು. ಇಲ್ಲಿಯೂ ಮೊದಲ ದಿನ ನಾಲ್ಕು ವಿಕೆಟ್‌ ಉರುಳಿಸಿ ಮಧ್ಯಪ್ರದೇಶ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ರಾಜ್ಯ ತಂಡದಲ್ಲಿರುವ ಹುಬ್ಬಳ್ಳಿಯ ಪ್ರತೀಕ ಪಾಟೀಲ ಹಾಗೂ ಪರೀಕ್ಷಿತ್‌ ಶೆಟ್ಟಿ ತವರಿನ ಅಂಗಳದಲ್ಲಿ ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಇಲ್ಲಿಯೂ ಅವರು ‘ಬೆಂಚ್‌’ ಕಾಯಬೇಕಾಯಿತು. ನಾಕೌಟ್‌ ಪ್ರವೇಶಿಸುವ ನಿಟ್ಟಿನಲ್ಲಿ ರಾಜ್ಯ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ ಮೊದಲ ಇನಿಂಗ್ಸ್‌ 89 ಓವರ್‌ಗಳಲ್ಲಿ 7 ವಿಕೆಟ್‌ಗೆ 244 (ಪಾರ್ಥ ಗೋಸ್ವಾಮಿ 35, ಆಶುತೋಷ್ ಶರ್ಮಾ 14, ಸಲ್ಮಾನ್‌ ಖಾನ್‌ 30, ಅತುಲ್‌ ಕುಶ್ವಾಹ 17, ಸಿದ್ದಾರ್ಥ್‌ ಪಾಟೀದಾರ್ 65, ರಾಹುಲ್‌ ಬಾಥಮ್‌ ಬ್ಯಾಟಿಂಗ್‌ 44, ರಾಜರ್ಷಿ ಶ್ರೀವಾತ್ಸವ ಬ್ಯಾಟಿಂಗ್‌ 17; ಎಂ.ಬಿ. ದರ್ಶನ್‌ 34ಕ್ಕೆ1, ಮನೋಜ ಭಾಂಡಗೆ 49ಕ್ಕೆ4, ಎಸ್‌. ಪುನಿತ್‌ 51ಕ್ಕೆ1, ಕಿಶನ್ ಬೆದಾರೆ 17ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.