ADVERTISEMENT

ಸಿ.ಕೆ. ನಾಯ್ಡು ಕ್ರಿಕೆಟ್: ಗಿರಿನಾಥ್‌ ಅರ್ಧಶತಕ, ಆಂಧ್ರ ಉತ್ತಮ ಮೊತ್ತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 12:58 IST
Last Updated 5 ಜನವರಿ 2020, 12:58 IST

ಬೆಳಗಾವಿ: ಗಿರಿನಾಥ್‌ ರೆಡ್ಡಿ ಅರ್ಧಶತಕದ (62; 150ಎ, 4ಬೌಂ, 1ಸಿಕ್ಸರ್) ನೆರವಿನಿಂದ ಆಂಧ್ರಪ್ರದೇಶ ತಂಡವು, 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡದ ವಿರುದ್ಧ ಮೊದಲನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆ ಹಾಕಿತು.

ಇಲ್ಲಿನ ಕಣಬರ್ಗಿ ರಸ್ತೆಯಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಭಾನುವಾರ ಆರಂಭವಾದ 4 ದಿನಗಳ ಪಂದ್ಯದಲ್ಲಿ, ಆಂಧ್ರ 84.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 281 ರನ್‌ ಗಳಿಸಿದೆ. ಕರ್ನಾಟಕವು 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 13 ರನ್ ಗಳಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡದ ಬೌಲರ್‌ಗಳು ಪ್ರವಾಸಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಆ ತಂಡ 56 ರನ್‌ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್‌ಗಳನ್ನು ಕಳದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಎಸ್. ತರುಣ್ ಹಾಗೂ ಕೆ. ಮಹೀಪ್ ಕುಮಾರ್ ವೇಗಿ ವೈಶಾಕ್‌ ಬೌಲಿಂಗ್‌ ದಾಳಿಗೆ ಬಲಿಯಾದರು. ಯು.ಎಂ.ಎಸ್. ಗಿರಿನಾಥ್ ಹಾಗೂ ಸಾಯಿವರ್ಧನ್‌ ವಿಕೆಟ್‌ಗಳನ್ನು ಎಂ.ಎಸ್. ಭಾಂಡಗೆ ಕೆಡವಿದರು. ಬಳಿಕ, ಯಾರಾ ಸಂದೀಪ್‌ (44) ತಂಡಕ್ಕೆ ಚೇತರಿಕೆ ನೀಡಿದರು. ಅವರೊಂದಿಗೆ ಗಿರಿನಾಥ್‌ 150 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್‌ ಬಾರಿಸಿ ಆಸರೆಯಾದರು. ಅವರಿಗೆ ಸಾಥ್ ನೀಡಿದ ಪಿ.ಪಿ. ಮನೋಹರ್‌ (48) ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು.

ADVERTISEMENT

ಕರ್ನಾಟಕದ ವಿಜಯಕುಮಾರ್ ವೈಶಾಕ್‌ 4 ವಿಕೆಟ್‌ ಗಳಿಸಿ ಆಂಧ್ರದ ಬ್ಯಾಟ್ಸ್‌ಮನ್‌ಗಳನ್ನು ಚಳಿಯಲ್ಲೂ ಬೆವರುವಂತೆ ಮಾಡಿದರು. ಉಳಿದಂತೆ ಎಂ.ಎಸ್. ಭಾಂಡಗೆ 3, ಅಭಿಲಾಷ್ ಶೆಟ್ಟಿ 2 ಹಾಗೂ ಪ್ರಣವ್ ಭಾಟಿಯಾ 1 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್: ಆಂಧ್ರ 84.5 ಓವರ್‌ಗಳಲ್ಲಿ 281 (ಗಿರಿನಾಥ್‌ ರೆಡ್ಡಿ 62, ಪಿ.‍ಪಿ. ಮನೋಹರ್‌ 48, ಯಾರಾ ಸಂದೀಪ್ 44, ಯು.ವರ್ಮಾ 33; ವಿಜಯಕುಮಾರ್‌ ವೈಶಾಕ್ 63ಕ್ಕೆ 4, ಎಂ.ಎಸ್. ಭಾಂಡಗೆ 49ಕ್ಕೆ 3, ಅಭಿಲಾಷ್ ಶೆಟ್ಟಿ 34ಕ್ಕೆ 2)

ಕರ್ನಾಟಕ: ಮೊದಲ ಇನ್ನಿಂಗ್ಸ್‌; 2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 13 (ಅಂಕಿತ್‌ ಉಡುಪ ಬ್ಯಾಟಿಂಗ್ 5, ಶಿವಕುಮಾರ್‌ ಬ್ಯಾಟಿಂಗ್ 7).

2ನೇ ದಿನದ ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.