ADVERTISEMENT

ಲಯಕ್ಕೆ ಮರಳುವತ್ತ ರಾಹುಲ್ ಚಿತ್ತ

ಭಾರತ–ಜಿಂಬಾಬ್ವೆ 3ನೇ ಏಕದಿನ ಪಂದ್ಯ ಇಂದು

ಪಿಟಿಐ
Published 21 ಆಗಸ್ಟ್ 2022, 20:03 IST
Last Updated 21 ಆಗಸ್ಟ್ 2022, 20:03 IST
ಭಾರತ ಕ್ರಿಕೆಟ್ ತಂಡ 
ಭಾರತ ಕ್ರಿಕೆಟ್ ತಂಡ    

ಹರಾರೆ: ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಭಾರತ ತಂಡ ಅತಿಥೇಯ ಜಿಂಬಾಬ್ವೆ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದೆ.

ಮೂರು ಪಂದ್ಯಗಳ ಸರಣಿಯ ಮೊದಲೆರಡರಲ್ಲಿ ಸುಲಭ ಜಯಸಾಧಿಸಿರುವ ಭಾರತವು ಈಗ ತನ್ನ ಬೆಂಚ್‌ ಶಕ್ತಿಯನ್ನು ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ.

ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಗೆ ತಂಡ ಕಟ್ಟುವತ್ತಲೂ ಆಯ್ಕೆ ಸಮಿತಿ ಕಣ್ಣು ನೆಟ್ಟಿದೆ. ಆದ್ದರಿಂದ ಈ ವರ್ಷ ನಡೆಯುವ ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡುವ ಆಟಗಾರರು ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಅವಕಾಶ ಪಡೆಯಬಹುದು.

ADVERTISEMENT

2–0ಯಿಂದ ಸರಣಿಯನ್ನು ತಂಡವು ಕೈವಶ ಮಾಡಿಕೊಂಡಿದೆ. ಆದರೆ, ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ನಂತರ ಹೋದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳುವಲ್ಲಿ ರಾಹುಲ್ ವಿಫಲರಾದರು. ಅವರು ಕೊನೆ ಪಂದ್ಯದಲ್ಲಿಯೂ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. ಆದರೆ ಶಿಖರ್ ಧವನ್‌ಗೆ ವಿಶ್ರಾಂತಿ ಕೊಡುವ ಸಾಧ್ಯತೆ ಇದೆ. ಇದರಿಂದಾಗಿ ರಾಹುಲ್ ಅವರೊಂದಿಗೆ ಶುಭಮನ್ ಗಿಲ್ ಅಥವಾ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಬಹುದು.

ಕಳೆದ ಪಂದ್ಯದಲ್ಲಿ ಮಿಂಚಿರುವ ಸಂಜು ಸ್ಯಾಮ್ಸನ್ ಮತ್ತೊಂದು ಅವಕಾಶ ಪಡೆಯಬಹುದು. ಬೌಲಿಂಗ್‌ನಲ್ಲಿ ಕೆಲವು ಬದಲಾವಣೆಗಳಾಗಬಹುದು. ಸಿರಾಜ್ ವಿಶ್ರಾಂತಿ ಪಡೆದು ಆವೇಶ್ ಖಾನ್ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಆತಿಥೇಯ ತಂಡವು ಎರಡನೇ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಸ್ವಲ್ಪ ಭರವಸೆಯ ಆಟವಾಡಿತ್ತು. ಆದರೆ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ರೆಗಿಸ್ ಚಕಾಬ್ವಾ ನಾಯಕತ್ವದ ತಂಡವು ಸಮಾಧಾನಕರ ಗೆಲುವಿಗೆ ಪ್ರಯತ್ನಿಸಬಹುದು.

ಪಂದ್ಯ ಆರಂಭ: ಮಧ್ಯಾಹ್ನ 12.45

ನೇರ ಪ್ರಸಾರ: ಸೋನಿ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.