ಕೇರ್ನ್ಸ್ (ಆಸ್ಟ್ರೇಲಿಯಾ): ಗ್ಲೆನ್ಸ್ ಮ್ಯಾಕ್ಸ್‌ವೆಲ್ ಅಮೋಘ ಕ್ಯಾಚ್ ಹಿಡಿದರಲ್ಲದೇ, ನಂತರ ಬಿರುಸಿನ ಅಜೇಯ ಅರ್ಧ ಶತಕ ಸಿಡಿಸಿದರು. ಅವರ ಆಲ್‌ರೌಂಡ್ ಆಟದ ನೆರವಿನಿಂದ ಆಸ್ಟ್ರೇಲಿಯಾ, ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಶನಿವಾರ ಎರಡು ವಿಕೆಟ್‌ಗಳಿಂದ ಸೋಲಿಸಿತು.
ಆತಿಥೇಯರು ಸರಣಿಯನ್ನೂ 2–1 ರಿಂದ ಗೆದ್ದುಕೊಂಡರು. ದಕ್ಷಿಣ ಆಫ್ರಿಕಾ 7 ವಿಕೆಟ್‌ಗೆ 172 ರನ್ ಬಾರಿಸಿತು. ಆಸ್ಟ್ರೇಲಿಯಾ 19.5 ಓವರುಗಳಲ್ಲಿ 8 ವಿಕೆಟ್‌ಗೆ 173 ರನ್ ಬಾರಿಸಿತು.
ಒಂದು ಹಂತದಲ್ಲಿ ಕಾಂಗರೂ ಪಡೆ 14ನೇ ಓವರಿನ ಬಳಿಕ 122 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತೊಂದರೆಗೆ ಸಿಲುಕಿತ್ತು. ಆದರೆ ಮ್ಯಾಕ್ಸ್‌ವೆಲ್ ಸಕಾಲದಲ್ಲಿ ಮಿಂಚಿ 36 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸಿದರು. ಕೊನೆಯ ಓವರಿನ ಐದನೇ ಎಸೆತವನ್ನು ಬೌಂಡರಿಗಟ್ಟಿ ಗೆಲುವು ಪೂರೈಸಿದರು.
19ನೇ ಓವರಿನಲ್ಲಿ ಕಾರ್ಬಿನ್ ಬಾಷ್ (26ಕ್ಕೆ3) ಎರಡು ಎಸೆತಗಳಲ್ಲಿ ಬೆನ್ ದ್ವಾರ್ಷಿಯಸ್ ಮತ್ತು ನಥಾನ್ ಎಲಿಸ್ ಅವರ ವಿಕೆಟ್‌ಗಳನ್ನು ಪಡೆದಿದ್ದರಿಂದ ಪಂದ್ಯ ಕುತೂಹಲಕರ ಘಟ್ಟಕ್ಕೆ ತಲುಪಿತ್ತು.
ಇದಕ್ಕೆ ಮೊದಲು ದಕ್ಷಿಣ ಆಫ್ರಿಕಾ ಪರ ಡೆವಾಲ್ಡ್ ಬ್ರೆವಿಸ್ 26 ಎಸೆತಗಳಲ್ಲಿ ಒಂದು ಬೌಂಡರಿ, 6 ಸಿಕ್ಸರ್‌ಗಳಿದ್ದ 53 ರನ್ ಬಾರಿಸಿದ್ದರು. 12ನೇ ಓವರಿನಲ್ಲಿ ಮ್ಯಾಕ್ಸ್‌ವೆಲ್ ಲಾಂಗ್‌ಆನ್‌ನಲ್ಲಿ ಓಡಿ ಹಿಡಿದ ಅಮೋಘ ಕ್ಯಾಚ್‌ನಿಂದ ಅವರ ಆಟಕ್ಕೆ ತೆರೆಬಿತ್ತು.
ದಿಗ್ಗಜ ಆಟಗಾರ ಬಾಬ್ ಸಿಂಪ್ಸನ್ ಅವರಿಗೆ ಗೌರವ ಸಲ್ಲಿಸಲು ಆಸ್ಟ್ರೇಲಿಯಾ ಆಟಗಾರರು ತೋಳಿಗೆ ಕಪ್ಪುಪಟ್ಟಿ ಕಟ್ಟಿ ಆಡಿದರು.
ಈ ಎರಡು ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಮೊದಲ ಪಂದ್ಯ ಮಂಗಳವಾರ ಕೇರ್ನ್ಸ್‌ನಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.