ADVERTISEMENT

ಪಾಕ್‌ ವಿರುದ್ಧದ ವಿಶ್ವಕಪ್ ಪಂದ್ಯ: ನಿರ್ಧಾರ ಸದ್ಯಕ್ಕಿಲ್ಲ

ಪಿಟಿಐ
Published 23 ಫೆಬ್ರುವರಿ 2019, 1:37 IST
Last Updated 23 ಫೆಬ್ರುವರಿ 2019, 1:37 IST
ಸರ್ಫರಾಜ್ ಅಹಮ್ಮದ್‌
ಸರ್ಫರಾಜ್ ಅಹಮ್ಮದ್‌   

ನವದೆಹಲಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯ ಆಡುವುದರ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ತಿಳಿಸಿದೆ.

ಅಂತರರರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ)‌ ಶುಕ್ರವಾರ ಪತ್ರ ಬರೆದಿರುವ ಸಿಒಎ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮತ್ತು ಬೆಂಬಲಿಸುವ ರಾಷ್ಟ್ರಗಳನ್ನು ದೂರ ಇರಿಸಬೇಕು ಎಂದು ಕೋರಿದೆ.

ಕಳೆದ ವಾರ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಸಾವಿಗೆ ಕಾರಣವಾದ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವಂತೆ ಕ್ರಿಕೆಟ್‌ ವಲಯ ಮತ್ತು ಸಾರ್ವಜನಿಕರಿಂದ ಒತ್ತಡ ಉಂಟಾಗಿತ್ತು.

ADVERTISEMENT

ಈ ಹಿನ್ನೆಲೆಯಲ್ಲಿ ಶುಕ್ರವಾರ ಸಿಒಎ ಸಭೆ ನಡೆಸಿತ್ತು. ಆದರೆ ಪಂದ್ಯದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಮುಂದಾಗದೆ, ಐಸಿಸಿಗೆ ಪತ್ರ ಬರೆಯಲು ತೀರ್ಮಾನಿಸಿತು.

‘ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎದುರಿನ ಪಂದ್ಯ ಇರುವುದು ಜೂನ್‌ 16ಕ್ಕೆ. ಅದು ಇನ್ನೂ ಬಹಳ ದೂರ ಇದೆ. ಸರ್ಕಾರದ ಜೊತೆ ಮಾತುಕತೆ ನಡೆಸಿದ ನಂತರ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್‌ ಸಭೆಯ ನಂತರ ತಿಳಿಸಿದರು.

‘ಭಯೋತ್ಪಾದನೆಯ ಕುರಿತ ನಮ್ಮ ನಿಲುವನ್ನು ಐಸಿಸಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆಟಗಾರರು ಮತ್ತು ಸಿಬ್ಬಂದಿಯ ಸುರಕ್ಷತೆಯೂ ಮುಖ್ಯ. ದುಬೈನಲ್ಲಿ ನಡೆಯಲಿರುವ ಮುಂದಿನ ಐಸಿಸಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು’ ಎಂದು ರಾಯ್ ತಿಳಿಸಿದರು.

ಕ್ರಿಕೆಟ್‌ ಮೇಲೆ ‘ದಾಳಿ’ಗೆ ಖಂಡನೆ
ಕರಾಚಿ (ಪಿಟಿಐ):
ಪುಲ್ವಾಮಾ ಘಟನೆಯ ನಂತರ ಕ್ರಿಕೆಟ್‌ ಮೇಲೆ ನಿರಂತರ ‘ದಾಳಿ’ ನಡೆಯುತ್ತಿರುವುದು ಬೇಸರದ ವಿಷಯ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್‌ ಅಹಮ್ಮದ್‌ ಹೇಳಿದ್ದಾರೆ.

‘ವಿಶ್ವಕಪ್‌ನಲ್ಲಿ ನಮ್ಮ ತಂಡದ ಮೇಲಿನ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಇದನ್ನು ಕಿವಿಗೆ ಹಾಕಿಕೊಳ್ಳಬಾರದು. ಪಂದ್ಯ ನಿಗದಿಯಂತೆ ನಡೆಯಬೇಕು’ ಎಂದು ಅವರು ಕ್ರಿಕೆಟ್‌ಗೆ ಸಂಬಂಧಿಸಿದ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಆಗ್ರಹಿಸಿದ್ದಾರೆ.

ಭಾರತ ಆಡಿ ಗೆಲ್ಲಲಿ: ಸಚಿನ್‌
ವಿಶ್ವಕಪ್‌ ಪಂದ್ಯದಲ್ಲಿ ಕಣಕ್ಕೆ ಇಳಿಯದೇ ಪಾಕಿಸ್ತಾನಕ್ಕೆ ಎರಡು ಪಾಯಿಂಟ್ ಬಿಟ್ಟುಕೊಡುವುದಕ್ಕಿಂತ ಭಾರತ ಆಡಿ ಗೆಲ್ಲುವುದು ಸಂತೋಷದ ವಿಷಯ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಪಂದ್ಯದ ಬಗ್ಗೆ ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಆಡಿರುವ ಮಾತಿಗೆ ಸಹಮತ ವ್ಯಕ್ತಪಡಿಸಿರುವ ಸಚಿನ್‌ ‘ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕ್‌ಗೆ ಒಮ್ಮೆಯೂ ಮಣಿದಿಲ್ಲ. ಈಗ ಆ ತಂಡವನ್ನು ಮಣಿಸಲು ಭಾರತಕ್ಕೆ ಮತ್ತೊಂದು ಅವಕಾಶ ಒದಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.