ರೋಹಿತ್ ಶರ್ಮಾ ಮತ್ತು ಡಾ. ಶಮಾ ಮೊಹಮ್ಮದ್
Credit: PTI, X/@IYC
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ನಾಲ್ಕು ವಿಕೆಟ್ ಅಂತರದಿಂದ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಕುರಿತು ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮೊಹಮ್ಮದ್ ಪ್ರತಿಕ್ರಿಯಿಸಿದ್ದಾರೆ.
‘ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯವನ್ನು ಗೆದ್ದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. 84 ರನ್ ಗಳಿಸಿದ್ದಕ್ಕಾಗಿ ನಾನು ವಿರಾಟ್ ಕೊಹ್ಲಿಯನ್ನು ಅಭಿನಂದಿಸುತ್ತೇನೆ. ಜತೆಗೆ, ಫೈನಲ್ ಪಂದ್ಯ ವೀಕ್ಷಿಸಲು ಎದುರು ನೋಡುತ್ತಿದ್ದೇನೆ’ ಎಂದು ಶಮಾ ಮೊಹಮ್ಮದ್ ತಿಳಿಸಿದ್ದಾರೆ.
ಈಚೆಗೆ ಶಮಾ ಮೊಹಮ್ಮದ್ ಅವರು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ‘ದಪ್ಪ ದೇಹ’ದ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿದ್ದ ಪೋಸ್ಟ್ ವಿವಾದಕ್ಕೆ ಕಾರಣವಾಗಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ಶಮಾ ನಡೆಯನ್ನು ಪಕ್ಷದ ನಾಯಕರು ತರಾಟೆಗೆ ತೆಗೆದುಕೊಂಡಿದ್ದರು. ಕೂಡಲೇ ಪೋಸ್ಟ್ ಅನ್ನು ತೆಗೆದು ಹಾಕುವಂತೆ ಸೂಚಿಸಿದ್ದು, ಇಂತಹ ವರ್ತನೆಯನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿದ್ದರು.
ಪೋಸ್ಟ್‌ನಲ್ಲಿ ಏನಿತ್ತು?: ‘ರೋಹಿತ್ ಶರ್ಮಾ ದಪ್ಪಗಾಗಿದ್ದಾರೆ. ತೂಕವನ್ನು ಇಳಿಸಿಕೊಳ್ಳಬೇಕಾಗಿದೆ’ ಎಂದು ಡಾ. ಶಮಾ ಮೊಹಮ್ಮದ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
‘ಭಾರತ ಕಂಡ ಅತ್ಯಂತ ಪೇಲವವಾದ ನಾಯಕ ಅವರು’ ಎಂದು ಶಮಾ ಮೊಹಮ್ಮದ್ ಅವರು ಹೇಳಿದ್ದರು. ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 15 ರನ್ ಗಳಿಸಿ ಔಟಾದ ಬೆನ್ನಲ್ಲೇ, ಈ ಪೋಸ್ಟ್ ಮಾಡಿದ್ದರು.
ಅಂತರ ಕಾಯ್ದುಕೊಂಡ ಕಾಂಗ್ರೆಸ್: ಶಮಾ ಪೋಸ್ಟ್ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ‘ರೋಹಿತ್ ಶರ್ಮಾ ಕುರಿತು ಪಕ್ಷದ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್ ಮಾಡಿದ ಪೋಸ್ಟ್ ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ. ಪೋಸ್ಟ್ ಅನ್ನು ತೆಗೆದುಹಾಕುವಂತೆ ತಿಳಿಸಿದ್ದು, ಇಂತಹ ತಪ್ಪನ್ನು ಮತ್ತೆ ಮಾಡದಂತೆ ತಿಳಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದರು.
ಬಿಜೆಪಿ ಕಿಡಿ: ‘ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 90 ಚುನಾವಣೆ ಕಳೆದುಕೊಂಡವರು, ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಪೇಲವ ಎಂದು ಹೇಳುತ್ತಿದ್ದಾರೆ’ ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ‘ಎಕ್ಸ್’ನಲ್ಲೇ ತಿರುಗೇಟು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.