ADVERTISEMENT

ಕೊರೊನಾ ಸೋಂಕು ಹರಡುವ ಭೀತಿ: ಐಪಿಎಲ್‌ ಮುಂದೂಡಿದ ಬಿಸಿಸಿಐ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 16:25 IST
Last Updated 13 ಮಾರ್ಚ್ 2020, 16:25 IST
   

ನವದೆಹಲಿ (ಎಎಫ್‌ಪಿ/ಪಿಟಿಐ): ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯನ್ನು ಏಪ್ರಿಲ್‌ 15ರವರೆಗೆ ಮುಂದೂಡಲಾಗಿದೆ.

ಈ ವಿಷಯವನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಪ್ರಕಟಿಸಿದೆ.

13ನೇ ಆವೃತ್ತಿಯ ಲೀಗ್‌ಗೆ ಇದೇ ತಿಂಗಳ 29ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚಾಲನೆ ನೀಡಬೇಕಿತ್ತು. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಮುಖಾಮುಖಿ ಯಾಗಬೇಕಿತ್ತು.

ADVERTISEMENT

ಕ್ರೀಡಾಕೂಟಗಳ ವೇಳೆ ಜನಸಮೂಹ ಸೇರುವುದನ್ನು ನಿರ್ಬಂಧಿಸುವಂತೆ ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಈ ಸೂಚನೆಯನ್ನು ಬಿಸಿಸಿಐ ಸೇರಿದಂತೆ ಇತರ ಎಲ್ಲಾ ಕ್ರೀಡಾ ಫೆಡರೇಷನ್‌ಗಳೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಗುರುವಾರ ಕೇಂದ್ರ ಕ್ರೀಡಾ ಸಚಿವಾಲಯ ಆದೇಶಿಸಿತ್ತು.

ವಿದೇಶಿ ಆಟಗಾರರು ಬ್ಯುಸಿನೆಸ್‌ ವೀಸಾ ಪಡೆದು ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಈ ವೀಸಾ ಹೊಂದಿರುವವರಿಗೆ ಏಪ್ರಿಲ್‌ 15ರವರೆಗೆ ಭಾರತ ಪ್ರವೇಶ ನಿರ್ಬಂಧಿಸಲಾಗಿದೆ. ಈ ಅಂಶಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್‌ ಶಾ ಅವರು ಐಪಿಎಲ್‌ ಅಧಿಕಾರಿಗಳೊಂದಿಗೆ ಚರ್ಚಿಸಿ, ಲೀಗ್‌ ಮುಂದೂಡುವ ತೀರ್ಮಾನಕ್ಕೆ ಬಂದಿದ್ದಾರೆ.

ಈ ಸಂಬಂಧ ಶುಕ್ರವಾರ ಎಂಟು ಫ್ರಾಂಚೈಸ್‌ಗಳಿಗೂ ಮಾಹಿತಿ ನೀಡಿರುವ ಬಿಸಿಸಿಐ, ಶನಿವಾರ ಮುಂಬೈಯಲ್ಲಿ ಮಾಲೀಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ನಿರ್ಧರಿಸಿದೆ.

‘ಆಟಗಾರರು, ನೆರವು ಸಿಬ್ಬಂದಿ, ಫ್ರಾಂಚೈಸ್‌ ಮಾಲೀಕರು, ಪ್ರೇಕ್ಷಕರು ಹೀಗೆ ಎಲ್ಲರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಲೀಗ್‌ ಮುಂದಕ್ಕೆ ಹಾಕಲು ನಿರ್ಧರಿಸಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿದೇಶಿ ಆಟಗಾರರಿಲ್ಲದೇ ಪಂದ್ಯಗಳನ್ನು ಆಯೋಜಿಸಬಾರದೆಂದು ಫ್ರಾಂಚೈಸ್‌ಗಳು ಪಟ್ಟು ಹಿಡಿದಿವೆ. ಏಪ್ರಿಲ್‌ 15ರ ನಂತರ ವಿದೇಶಿ ಆಟಗಾರರಿಗೆ ಭಾರತದ ವೀಸಾ ಸಿಗುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ಲೀಗ್‌ ಮುಂದೂಡುವಂತೆ ಫ್ರಾಂಚೈಸ್‌ಗಳು ಒತ್ತಡ ಹೇರಿವೆ. ಹೀಗಾಗಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ಗೆ ಆತಂಕ: ಐಪಿಎಲ್‌ ಮುಂದೂಡಿರುವುದರಿಂದ ಸ್ಟಾರ್‌ ಸ್ಪೋರ್ಟ್ಸ್‌ ಸಂಸ್ಥೆಯಲ್ಲಿ ತಳಮಳ ಶುರುವಾಗಿದೆ.

ಈ ಸಂಸ್ಥೆಯು ₹ 16,347 ಕೋಟಿ ನೀಡಿ ಐದು ವರ್ಷಗಳ ಅವಧಿಯ ಐಪಿಎಲ್‌ ಪ್ರಸಾರದ ಹಕ್ಕು ಖರೀದಿಸಿದೆ.

ಈ ಬಾರಿ ಲೀಗ್‌ ರದ್ದಾದರೆ ಈ ಸಂಸ್ಥೆಗೆ ₹5,500 ಕೋಟಿ ನಷ್ಟವಾಗಲಿದೆ. ಈ ಸಂಬಂಧ ಬಿಸಿಸಿಐ ಜೊತೆ ಮಾತುಕತೆ ನಡೆಸಲು ಸ್ಟಾರ್‌ ಸ್ಪೋರ್ಟ್ಸ್‌ ಚಿಂತಿಸಿದೆ.

ಕ್ರೀಡಾಕೂಟಗಳ ಮೇಲೆ ನಿರ್ಬಂಧ: ರಾಜ್ಯದಲ್ಲಿ ಜನಸಮೂಹ ಸೇರುವುದನ್ನು ನಿರ್ಬಂಧಿಸಿರುವ ದೆಹಲಿ ಸರ್ಕಾರ, ಯಾವುದೇ ಕ್ರೀಡಾಕೂಟಗಳನ್ನು ಆಯೋಜಿಸದಂತೆ ಸೂಚಿಸಿದೆ.

‘ಕ್ರೀಡಾಕೂಟಗಳು ನಡೆದರೆ ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇದರಿಂದ ಸೋಂಕು ಎಲ್ಲರಿಗೂ ಹರಡುವ ಅಪಾಯವಿದೆ. ಇದನ್ನು ತಡೆಯುವ ಉದ್ದೇಶದಿಂದಲೇ ಐಪಿಎಲ್‌ ಹಾಗೂ ಇತರ ಕ್ರೀಡಾಕೂಟಗಳ ಮೇಲೆ ನಿರ್ಬಂಧ ಹೇರಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್‌ 15ಕ್ಕೆ ಆರಂಭವಾಗುತ್ತಾ?
ಒಂದೊಮ್ಮೆ ಕೊರೊನಾ ಸೋಂಕು ಉಲ್ಬಣಿಸಿದ್ದೇ ಆದರೆ ಏಪ್ರಿಲ್‌ 15ರಂದೂ ಐಪಿಎಲ್‌ಗೆ ಚಾಲನೆ ಸಿಗುವುದು ಅನುಮಾನ ಎನ್ನಲಾಗಿದೆ.

ಒಂದೊಮ್ಮೆ ಚಾಲನೆ ಸಿಕ್ಕರೂ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶ ನಿರ್ಬಂಧಿಸುವ ಸಾಧ್ಯತೆ ಹೆಚ್ಚಿದೆ.

ಮುಂಬೈಯಲ್ಲಿ ಶನಿವಾರ ನಡೆಯುವ ಐಪಿಎಲ್‌ ಆಡಳಿತ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಯಾವುದೇ ಕ್ರೀಡಾಕೂಟಗಳನ್ನು ಆಯೋಜಿಸಲು ಅನುಮತಿ ನೀಡುವುದಿಲ್ಲ ಎಂದು ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿ ಸರ್ಕಾರಗಳು ಹೇಳಿವೆ. ಹೀಗಾಗಿ ಬಿಸಿಸಿಐ, ಐದು ಪರ್ಯಾಯ ಸ್ಥಳಗಳನ್ನು ಗುರುತಿಸಲು ಮುಂದಾಗಿದೆ. ಒಂದೊಮ್ಮೆ ಕರ್ನಾಟಕ, ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳು ಐಪಿಎಲ್‌ ಆಯೋಜನೆಗೆ ಅನುಮತಿ ನಿರಾಕರಿಸಿದರೆ, ಪರ್ಯಾಯ ಸ್ಥಳಗಳಲ್ಲಿ (ಲಖನೌ, ರಾಜ್‌ಕೋಟ್‌, ಇಂದೋರ್‌, ರಾಯಪುರ ಮತ್ತು ವಿಶಾಖಪಟ್ಟಣ) ಪಂದ್ಯಗಳನ್ನು ನಡೆಸಲು ಮಂಡಳಿ ಚಿಂತಿಸಿದೆ.

ಟೂರ್ನಿಯ ಅವಧಿ ಕಡಿತ: ಏಪ್ರಿಲ್‌ 15ರಿಂದ ಲೀಗ್‌ ಆರಂಭವಾದರೂ, ನಿಗದಿಯಂತೆ 56 ದಿನಗಳ ಕಾಲ ಪಂದ್ಯಗಳನ್ನು ನಡೆಸುವುದು ಕಷ್ಟ.

ಐಸಿಸಿ ಫ್ಯೂಚರ್‌ ಟೂರ್ಸ್‌ ಪ್ರೊಗ್ರಾಮ್‌ನಡಿ (ಎಫ್‌ಟಿಪಿ) ಮೇ ತಿಂಗಳ ನಂತರ ಹಲವು ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ನಡೆಯಲಿವೆ. ಇವುಗಳಲ್ಲಿ ಪಾಲ್ಗೊಳ್ಳಲು ಆಟಗಾರರು ತಮ್ಮ ದೇಶಗಳಿಗೆ ತೆರಳುವುದು ಅನಿವಾರ್ಯ. ಹೀಗಾಗಿ ಐಪಿಎಲ್‌ ಅವಧಿಯನ್ನು 40 ದಿನಗಳಿಗೆ ಕಡಿತಗೊಳಿಸಬೇಕಾಗುತ್ತದೆ. ಜೊತೆಗೆ ನಿಗದಿಗಿಂತಲೂ ಹೆಚ್ಚು ‘ಡಬಲ್‌ ಹೆಡರ್‌’ (ದಿನಕ್ಕೆ ಎರಡು) ಪಂದ್ಯಗಳನ್ನೂ ಆಯೋಜಿಸಬೇಕಾಗುತ್ತದೆ.

ಫ್ರಾಂಚೈಸ್‌ಗಳಿಗೆ ಹೊರೆ
ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸುವ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಫ್ರಾಂಚೈಸ್‌ಗಳು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಹಣ ಪಾವತಿಸಬೇಕಾಗಿದೆ.

ಆರ್‌ಸಿಬಿ ತಂಡದ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಈ ಫ್ರಾಂಚೈಸ್‌, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಈ ಹಿಂದೆ ₹ 30 ಲಕ್ಷ ಪಾವತಿಸುತ್ತಿತ್ತು. ಆದರೆ ಈಗ ಈ ಮೊತ್ತ ₹ 50 ಲಕ್ಷಕ್ಕೆ ಏರಿದೆ.

ಒಂದೊಮ್ಮೆ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಪರಿಸ್ಥಿತಿ ನಿರ್ಮಾಣವಾದರೆ ಟಿಕೆಟ್‌ ಮಾರಾಟದಿಂದ ಬರುತ್ತಿದ್ದ ಹಣ ಫ್ರಾಂಚೈಸ್‌ಗಳ ಕೈತಪ್ಪಲಿದೆ. ಪ್ರಾಯೋಜಕರೂ ಹಿಂದೆ ಸರಿದರೆ ಬೊಕ್ಕಸ ಬರಿದಾಗುತ್ತದೆ. ಅಂತಹ ಸಂದರ್ಭಗಳಲ್ಲಿ ರಾಜ್ಯ ಸಂಸ್ಥೆಗಳಿಗೆ ದುಬಾರಿ ಮೊತ್ತ ಪಾವತಿಸಲು ಫ್ರಾಂಚೈಸ್‌ಗಳು ಹಿಂದೇಟು ಹಾಕಬಹುದು. ಈ ಸಂಬಂಧ ರಾಜ್ಯ ಸಂಸ್ಥೆಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆಗೂ ಮುಂದಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.