ರೋಹಿತ್ ಶರ್ಮಾ
(ಪಿಟಿಐ ಚಿತ್ರ)
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಮುಂಬೈ ಪರ ಅತಿ ಹೆಚ್ಚು ಯಶಸ್ಸು ಕಂಡಿರುವ ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ಹಾರ್ದಿಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದರೊಂದಿಗೆ 2024ನೇ ವರ್ಷದಲ್ಲಿ ಮುಂಬೈ ಪರ ರೋಹಿತ್ ಕೊನೆಯದಾಗಿ ಆಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಭವಿಷ್ಯದ ಆಟಗಾರರ ಯೋಜನೆಯಲ್ಲಿ ರೋಹಿತ್ ಅವರನ್ನು ಕೈಬಿಡಲಾಗಿದೆ ಎಂಬ ಚರ್ಚೆ ಹುಟ್ಟಿಕೊಂಡಿದೆ.
ಐಪಿಎಲ್ 2025 ಟೂರ್ನಿಗೆ ಮೆಗಾ ಹರಾಜು ನಡೆಯಲಿದೆ. ಈ ವೇಳೆ ಬಹುತೇಕ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಲಾಗುತ್ತದೆ. ಅಂದರೆ ಪ್ರತಿ ಫ್ರಾಂಚೈಸಿಗೆ ಗರಿಷ್ಠ ಮೂವರು ಭಾರತೀಯ ಹಾಗೂ ಓರ್ವ ವಿದೇಶ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಇರುತ್ತದೆ.
ಈಗಿನ ಲೆಕ್ಕಾಚಾರದ ಪ್ರಕಾರ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ನಾಯಕ ಹಾರ್ದಿಕ್ ಪಾಂಡ್ಯ ಜೊತೆಗೆ ಸೂರ್ಯಕುಮಾರ್ ಯಾದವ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಹಾಗಾದ್ದಲ್ಲಿ ಐಪಿಎಲ್ 2024ರ ಬಳಿಕ ರೋಹಿತ್‌ಗೆ ಮುಂಬೈ ತಂಡ ಬಿಟ್ಟು ಹೋಗುವಂತಹ ಪರಿಸ್ಥಿತಿ ಎದುರಾಗಬಹುದು. ಆದರೂ ಇವೆಲ್ಲವೂ ಮುಂದಿನ ವರ್ಷ ಚುಟುಕು ಪ್ರಕಾರದಲ್ಲಿ ರೋಹಿತ್ ನೀಡುವ ಪ್ರದರ್ಶನವನ್ನು ಅವಲಂಬಿಸಿರಲಿದೆ.
ಕಳೆದ 11 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ, ಐದು ಸಲ ಟ್ರೋಫಿ ಗೆಲ್ಲುವ ಮೂಲಕ ಯಶಸ್ವಿ ನಾಯಕರೆನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.