ADVERTISEMENT

ಕೋವಿಡ್–19 | ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ₹ 50 ಲಕ್ಷ ನೀಡಿದ ಸಚಿನ್

ಏಜೆನ್ಸೀಸ್
Published 27 ಮಾರ್ಚ್ 2020, 13:13 IST
Last Updated 27 ಮಾರ್ಚ್ 2020, 13:13 IST
   

ಮುಂಬೈ: ಭಾರತದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರು ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವ ಕೊರೊನಾವೈರಸ್‌ ನಿಯಂತ್ರಣಕ್ಕಾಗಿ ₹ 50 ಲಕ್ಷ ದಾನ ನೀಡಿದ್ದಾರೆ. ಸಚಿನ್‌ ನೀಡಿರುವ ಈ ಹಣವು ಇದುವರೆಗೆ ಕ್ರೀಡಾ ತಾರೆಗಳು ನೀಡಿರುವುದರಲ್ಲೇಗರಿಷ್ಠ ಮೊತ್ತ ಎನಿಸಿದೆ.

‘ಸಚಿನ್‌ ತೆಂಡೂಲ್ಕರ್ ಪ್ರಧಾನಮಂತ್ರಿ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿ ಪರಹಾರ ನಿಧಿಗೆ ₹ 25 ಲಕ್ಷ ನೀಡಲು ಬಯಸಿದ್ದಾರೆ. ಈ ಎರಡೂ ನಿಧಿಗೆ ಹಣ ನೀಡುವುದು ಅವರ ನಿರ್ಧಾರವಾಗಿದೆ’ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಾಮಾಜಿಕ ಕಾರ್ಯಗಳ ಸಲುವಾಗಿ ಸಚಿನ್‌ ಇದುವರೆಗೆ ಸಾಕಷ್ಟು ಬಾರಿ ಧನಸಹಾಯ ನೀಡಿದ್ದಾರೆ.
ಕ್ರಿಕೆಟಿಗರಾದ ಯುಸೂಫ್‌ ಹಾಗೂ ಇರ್ಫಾನ್‌ ಪಠಾಣ್‌ ಅವರು 4 ಸಾವಿರ ಮುಖಗವಸುಗಳನ್ನು ಬರೋಡಾ ಪೊಲೀಸರಿಗೆ ನೀಡಿದರೆ, ಪುಣೆ ಮೂಲದ ಎನ್‌ಜಿಒ ಮೂಲಕ ಮಹೇಂದ್ರ ಸಿಂಗ್‌ ಧೋನಿ ₹ 1 ಲಕ್ಷ ನೀಡಿದ್ದಾರೆ.

ADVERTISEMENT

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ₹ 50 ಲಕ್ಷ ಮೌಲ್ಯದ ಅಕ್ಕಿ ದಾನ ಮಾಡುವುದಾಗಿ ಹೇಳಿದ್ದಾರೆ. ಅಥ್ಲೀಟ್‌ಗಳಾದ ಭಜರಂಗ್‌ ಪೂನಿಯಾ ಹಾಗೂ ವೇಗದ ಓಟಗಾರ್ತಿ ಹಿಮಾ ದಾಸ್‌ ಅವರು ಮಾಸಿಕ ವೇತನ ನೀಡುವುದಾಗಿ ಘೊಷಿಸಿದ್ದಾರೆ.

ಕೋವಿಡ್‌–19 ಭೀತಿಯಿಂದಾಗಿ ಘೋಷಿಸಲಾಗಿರುವ ಲಾಕ್‌ಡೌನ್‌ ಆದೇಶವು ಏಪ್ರಿಲ್‌ 14ರ ವರೆಗೆ ಜಾರಿಯಲ್ಲಿರಲಿದೆ. ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ 730ನ್ನು ದಾಟಿದೆ.ಭಾರತದಲ್ಲಿ ಇದುವರೆಗೆ ಒಟ್ಟು 17 ಜನರು ಮೃತಪಟ್ಟಿದ್ದಾರೆ. ಪ್ರಪಂಚದಾದ್ಯಂತ 5.3 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, 23 ಸಾವಿರ ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.