ADVERTISEMENT

ವಿಶ್ವಕಪ್ ಸೆಮಿಫೈನಲ್‌: ನ್ಯೂಜಿಲೆಂಡ್‌ಗೆ ಜಯ, ಭಾರತದ ಫೈನಲ್ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 14:25 IST
Last Updated 10 ಜುಲೈ 2019, 14:25 IST
   

ಮ್ಯಾಂಚೆಸ್ಟರ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ತಲುಪುವ ಭಾರತ ತಂಡದ ಕನಸು ಭಗ್ನವಾಯಿತು. ಮಹೇಂದ್ರಸಿಂಗ್ ಧೋನಿ ಮತ್ತು ರವೀಂದ್ರ ಜಡೇಜ ಅವರ ವಿರೋಚಿತ ಹೋರಾಟವು ವ್ಯರ್ಥವಾಯಿತು.

ಮಂಗಳವಾರದ ಮಳೆಯಿಂದಾಗಿ ‘ಎರಡು ಕಂತು’ಗಳಲ್ಲಿ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವು 18 ರನ್‌ಗಳಿಂದ ಭಾರತದ ವಿರುದ್ಧ ಜಯಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 239 ರನ್‌ ಗಳಿಸಿತು. ಬುಧವಾರ ನಡೆದ ಇನಿಂಗ್ಸ್‌ನಲ್ಲಿ ಭಾರತ ತಂಡವು ಆರಂಭದಲ್ಲಿಯೇ ಎಡವಿತು. ಉತ್ತಮ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರು ತಂಡದ ಮೊತ್ತವು ಐದು ರನ್‌ಗಳಾಗುವಷ್ಟರಲ್ಲಿ ಪೆವಿಲಿಯನ್‌ ಸೇರಿದರು.

ADVERTISEMENT

ಬ್ಯಾಟಿಂಗ್ ಮಾಡಲು ಕ್ಲಿಷ್ಟಕರವಾಗಿದ್ದ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಅನುಭವಿ ದಿನೇಶ್ ಕಾರ್ತಿಕ್ ಕೂಡ ನಿರೀಕ್ಷೆಯನ್ನು ಹುಸಿಗೊಳಿಸಿದರು. ರಿಷಭ್ ಪಂತ್ (32; 56ಎಸೆತ, 4ಬೌಂಡರಿ) ಮತ್ತು ಹಾರ್ದಿಕ್ ಪಾಂಡ್ಯ (32; 62ಎಸೆತ, 2ಬೌಂಡರಿ) ಅವರು ಇನಿಂಗ್ಸ್‌ಗೆ ಜೀವ ತುಂಬುವ ಪ್ರಯತ್ನ ಮಾಡಿದರು. ಆದರೆ ತಾಳ್ಮೆ ಕಳೆದುಕೊಂಡು ಆಡಿದ ಕೆಟ್ಟ ಹೊಡೆತಗಳಿಗೆ ಇಬ್ಬರೂ ದಂಡ ತೆತ್ತರು. ಅದು ತಂಡಕ್ಕೆ ಭಾರವಾಯಿತು.

ತಂಡವು ಇದರಿಂದಾಗಿ 30.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 92 ರನ್‌ ಗಳಿಸಿತು. ಇನ್ನೊಂದು ಬದಿಯಲ್ಲಿ ಅಪಾರ ತಾಳ್ಮೆಯಿಂದ ಆಡುತ್ತಿದ್ದ ಮಹೇಂದ್ರಸಿಂಗ್ ಧೋನಿಯೊಂದಿಗೆ ಸೇರಿದ ರವೀಂದ್ರ ಜಡೇಜ ಇನಿಂಗ್ಸ್‌ನ ಚಹರೆಯನ್ನೇ ಬದಲಿಸಿಬಿಟ್ಟರು. 33ನೇ ಓವರ್‌ನಲ್ಲಿ ಅವರು ಜಿಮ್ಮಿ ನಿಶಾಮ್ ಎಸೆತವನ್ನು ಸಿಕ್ಸರ್‌ಗೆ ಎತ್ತಿದಾಗ ಭಾರತದ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಆವರಿಸಿದ್ದ ಹತಾಶೆಯ ಛಾಯೆಯು ಕರಗತೊಡಗಿತು.

ತಮ್ಮ ಕಣ್ಣುಗಳಲ್ಲಿ ನೀರು ತುಂಬಿಕೊಂಡು ನಿಂತಿದ್ದ ರೋಹಿತ್ ಶರ್ಮಾ, ರಾಹುಲ್ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮೊಗದಲ್ಲಿ ಮಂದಹಾಸ ಮೂಡಿತು.

48ನೇ ಓವರ್‌ನವರೆಗೂ ಹೋರಾಟ ಮಾಡಿದ ಧೋನಿ–ಜಡೇಜ ಜೋಡಿಯ ಆಟವು ಭಾರತವನ್ನು ಮತ್ತೆ ಗೆಲುವಿನ ಹಾದಿಗೆ ತಂದು ನಿಲ್ಲಿಸಿತು. ಜಡೇಜ ವೇಗದ ಆಟಕ್ಕೆ ಒತ್ತುಕೊಟ್ಟರು. ಆದರೆ ಧೋನಿ ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು.

ಆದರೆ, ಟ್ರೆಂಟ್‌ ಬೌಲ್ಟ್‌ ಎಸೆತವನ್ನು ಮೇಲಕ್ಕೆತ್ತಿದ್ದ ಜಡೇಜ ತಪ್ಪು ಮಾಡಿದ್ದರು. ಗಾಳಿಯನ್ನು ಸೀಳಿ ಆಗಸದತ್ತ ನುಗ್ಗಿದ್ದ ಚೆಂಡು ಬೌಂಡರಿಲೈನ್‌ನತ್ತ ಸಾಗಲಿಲ್ಲ. ಅದರ ಮೇಲಿನ ದೃಷ್ಟಿಯನ್ನು ಕದಲಿಸದೇ ಹಿಂಬಾಲಿಸಿದ ಫೀಲ್ಡರ್ ಕೇನ್ ವಿಲಿಯಮ್ಸನ್ ಅಮೋಘ ಕ್ಯಾಚ್ ಪಡೆದರು. ಫೈನಲ್ ಪಂದ್ಯದತ್ತ ಮಹತ್ವದ ಹೆಜ್ಜೆ ಇಟ್ಟರು.

ಆದರೂ ಕ್ರೀಸ್‌ನಲ್ಲಿದ್ದ ಧೋನಿ ಮೇಲೆ ಎಲ್ಲರ ಭರವಸೆ ಕಣ್ಣುಗಳು ನೆಟ್ಟಿದ್ದವು. ಆದರೆ 49ನೇ ಓವರ್‌ನಲ್ಲಿ ಎರಡನೇ ರನ್ ಓಡಿದ ಧೋನಿಗೆ ಮಾರ್ಟಿನ್ ಗಪ್ಟಿಲ್ ಎಸೆತ ನೇರ ಥ್ರೋ ಮುಳುವಾಯಿತು. ಕ್ರೀಸ್‌ನಿಂದ ಕೂದಲೆಳೆಯಷ್ಟು ದೂರದಲ್ಲಿ ಧೋನಿ ಬ್ಯಾಟ್‌ ಇತ್ತು. ಅಲ್ಲಿಗೆ ಕಿವೀಸ್ ಸತತ ಎರಡನೇ ಬಾರಿ ವಿಶ್ವಕಪ್ ಟೂರ್ನಿಯ ಫೈನಲ್ ತಲುಪುವುದು ಖಚಿತವಾಯಿತು. ಭಾರತದ ಅಭಿಮಾನಿಗಳ ಕಂಗಳದಲ್ಲಿ ನಿರಾಶೆಯ ಧಾರೆ ಸುರಿಯಿತು.

49.3 ಓವರ್‌ಗಳಲ್ಲಿ 221 ರನ್‌ ಗಳಿಸಿದ ಭಾರತದ ವಿಶ್ವಕಪ್ ಅಭಿಯಾನ ಮುಗಿಯಿತು. ರೌಂಡ್‌ ರಾಬಿನ್ ಲೀಗ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ ವಿರಾಟ್ ಕೊಹ್ಲಿ ಬಳಗದ ಆಟ ಮುಗಿಯಿತು.

ಸ್ಕೋರ್‌ :https://bit.ly/2XCWHpg

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.