ADVERTISEMENT

ಆಂಧ್ರದ ರನ್‌ ಗಳಿಕೆಗೆ ಪುನಿತ್ ಕಡಿವಾಣ

ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ;

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 18:54 IST
Last Updated 3 ಆಗಸ್ಟ್ 2019, 18:54 IST
ಬೆಂಗಳೂರಿನಲ್ಲಿ ಶನಿವಾರ ಆರಂಭವಾದ ಕ್ಯಾಪ್ಟನ್ ತಿಮ್ಮಪ್ಪಯ್ಯ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಛತ್ತೀಸಗಡ ರಾಜ್ಯ ಕ್ರಿಕೆಟ್ ಸಂಘದ ಮಧ್ಯಮವೇಗಿ ಪುನೀತ್ ದಾತೆ ಅವರು ಆಂಧ್ರ ತಂಡದ ಜ್ಯೋತಿ ಸಾಯಿಕೃಷ್ಣ ಅವರ ವಿಕೆಟ್ ಗಳಿಸಿ ಸಂಭ್ರಮಿಸಿದರು  –ಆರ್. ಶ್ರೀಕಂಠ ಶರ್ಮಾ
ಬೆಂಗಳೂರಿನಲ್ಲಿ ಶನಿವಾರ ಆರಂಭವಾದ ಕ್ಯಾಪ್ಟನ್ ತಿಮ್ಮಪ್ಪಯ್ಯ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಛತ್ತೀಸಗಡ ರಾಜ್ಯ ಕ್ರಿಕೆಟ್ ಸಂಘದ ಮಧ್ಯಮವೇಗಿ ಪುನೀತ್ ದಾತೆ ಅವರು ಆಂಧ್ರ ತಂಡದ ಜ್ಯೋತಿ ಸಾಯಿಕೃಷ್ಣ ಅವರ ವಿಕೆಟ್ ಗಳಿಸಿ ಸಂಭ್ರಮಿಸಿದರು  –ಆರ್. ಶ್ರೀಕಂಠ ಶರ್ಮಾ   

ಬೆಂಗಳೂರು: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಛತ್ತೀಸಗಡ ಕ್ರಿಕೆಟ್ ಸಂಘದ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಂಡರು.

ಪುನಿತ್ ದಾತೆ (14–5–25–2) ಮತ್ತು ಪಂಕಜ್ ರಾವ್ (15–8–19–1) ಅವರ ಬಿಗಿ ದಾಳಿಯಿಂದಾಗಿ ಆಂಧ್ರ ಕ್ರಿಕೆಟ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 86 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 215 ರನ್‌ ಗಳಿಸಿದೆ.

ಶನಿವಾರ ಬೆಳಿಗ್ಗೆ ಆಂಧ್ರದ ಪ್ರಶಾಂತ್ ಕುಮಾರ್ (56; 221ಎಸೆತ 4ಬೌಂಡರಿ) ಮತ್ತು ಸಿ.ಆರ್. ಗಣೇಶ್ವರ (27; 40ಎ 4ಬೌಂ) ತಾಳ್ಮೆಯ ಆರಂಭ ನೀಡಿದರು. 13ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಪಂಕಜ್ ರಾವ್ ಮುರಿದರು. ಕ್ರೀಸ್‌ಗೆ ಬಂದ ಜ್ಯೋತಿ ಸಾಯಿಕೃಷ್ಣ (26 ರನ್) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 41 ರನ್‌ ಸೇರಿಸಲು ನೆರವಾದರು. ಈ ಜೊತೆಯಾಟವನ್ನು ಬಲಗೈ ಮಧ್ಯಮವೇಗಿ ಮುರಿದರು.

ADVERTISEMENT

ಈ ಹಂತದಲ್ಲಿ ಪ್ರಶಾಂತ್ ಜೊತೆಗೂಡಿದ ನಾಯಕ ರಿಕಿ ಭುಯ್ (39; 57ಎ, 3ಬೌಂ, 2ಸಿ) ಚೇತರಿಕೆಯ ಆಟವಾಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 79 ರನ್‌ಗಳು ಸೇರಿದವು. 62ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಅಜಯ್ ಮಂಡಲ್ ಮುರಿದರು. ಸೆಮಿಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ರಿಕಿ ವಿಕೆಟ್ ಪಡೆದ ಅಜಯ್ ಸಂಭ್ರಮಿಸಿದರು.

ಇನ್ನೊಂದು ಬದಿಯಲ್ಲಿ ಅತ್ಯಂತ ತಾಳ್ಮೆಯಿಂದ ಆಡಿ ಅರ್ಧಶತಕದ ಗಡಿ ದಾಟಿದ್ದ ಪ್ರಶಾಂತ್ ಅವರನ್ನು 70ನೇ ಓವರ್‌ನಲ್ಲಿ ಪುನಿತ್ ಔಟ್ ಮಾಡಿದರು. ವಿಕೆಟ್‌ಗಳು ಪತನವಾಗಿದ್ದರಿಂದ ರನ್‌ ಗಳಿಕೆಯ ವೇಗವೂ ಕಡಿಮೆಯಾಯಿತು. ಇದರಿಂದಾಗಿ ದಿನದಾಟದಲ್ಲಿ ಮುನ್ನೂರು ರನ್‌ಗಳ ಗಡಿ ದಾಟುವ ಆಂಧ್ರದ ಯೋಜನೆ ಕೈಗೂಡಲಿಲ್ಲ.

ಸಂಕ್ಷಿಪ್ತ ಸ್ಕೋರು
ಆಂಧ್ರ ಕ್ರಿಕೆಟ್ ಸಂಸ್ಥೆ: 86 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 215 (ಡಿ.ಬಿ. ಪ್ರಶಾಂತಕುಮಾರ್ 56, ಸಿ.ಆರ್. ಗಣೇಶ್ವರ್ 27, ಜ್ಯೋತಿಸಾಯಿಕೃಷ್ಣ 26, ರಿಕಿ ಭುಯ್ 39, ಕರಣ್ ಶಿಂಧೆ 26, ಗಿರಿನಾಥ ರೆಡ್ಡಿ 16, ಶೋಯಬ್ ಮೊಹಮ್ಮದ್ ಖಾನ್ 13, ಪಂಕಜ್ ರಾವ್ 19ಕ್ಕೆ1, ಅಜಯ್ ಮಂಡಲ್ 50ಕ್ಕೆ1, ಪುನಿತ್ ದಾತೆ 25ಕ್ಕೆ2, ಬಿನ್ನಿ ಸ್ಯಾಮುಯೆಲ್ 30ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.