ADVERTISEMENT

ಪಾಕ್ ಸರಣಿ ಬಿಟ್ಟು ಐಪಿಎಲ್‌ ಆಡುವತ್ತ ಕಮಿನ್ಸ್, ವಾರ್ನರ್ ಚಿತ್ತ

ರಾಯಿಟರ್ಸ್
Published 22 ಫೆಬ್ರುವರಿ 2022, 11:32 IST
Last Updated 22 ಫೆಬ್ರುವರಿ 2022, 11:32 IST
ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್
ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್   

ಮೆಲ್ಬರ್ನ್: ಮುಂದಿನ ತಿಂಗಳು ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟರ್ ಡೇವಿಡ್ ವಾರ್ನರ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಅವರು ಗೈರುಹಾಜರಾಗುವ ಸಾಧ್ಯತೆ ಇದೆ.ಅದೇ ಸಂದರ್ಭದಲ್ಲಿ ಭಾರತದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅವರು ಆಡಲಿದ್ದಾರೆನ್ನಲಾಗಿದೆ.

ಕಮಿನ್ಸ್, ವಾರ್ನರ್ ಜೊತೆಗೆ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ನೇಥನ್ ಲಯನ್ ಅವರು ಪಾಕ್ ಎದುರಿನ ಟೆಸ್ಟ್ ಸರಣಿಯ ತಂಡದಲ್ಲಿದ್ದಾರೆ.

ಕಮಿನ್ಸ್, ವಾರ್ನರ್, ಹ್ಯಾಜಲ್‌ವುಡ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಐಪಿಎಲ್‌ನ ವಿವಿಧ ತಂಡಗಳಲ್ಲಿದ್ದಾರೆ.

ADVERTISEMENT

‘ಆಸ್ಟ್ರೇಲಿಯಾ ತಂಡವು ಪಾಕ್ ಎದುರಿನ ಏಕೈಕ ಟಿ20 ಪಂದ್ಯದಲ್ಲಿ ಏಪ್ರಿಲ್ 5ರಂದು ಆಡಲಿದೆ. ಅದರ ನಂತರವಷ್ಟೇ ಆಟಗಾರರು ಐಪಿಎಲ್‌ ಫ್ರ್ಯಾಂಚೈಸಿಗಳಿಗೆ ತೆರಳುವರು’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೇಲಿ ತಿಳಿಸಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಅವರು ತಮ್ಮ ಮದುವೆಗಾಗಿ ರಜೆ ಪಡೆದಿದ್ದಾರೆ. ಆಸ್ಟ್ರೇಲಿಯಾದ ಉಳಿದ ಆಟಗಾರರು ಲಾಹೋರ್‌ನಲ್ಲಿ ಮಾರ್ಚ್ 21 ರಿಂದ 25ರವರೆಗೆ ನಡೆಯಲಿರುವ ಕೊನೆಯ ಟೆಸ್ಟ್ ನಂತರ ಸ್ವದೇಶಕ್ಕೆ ಮರಳುವ ಸಾಧ್ಯತೆ ಇದೆ.

‘ಬಹುಮಾದರಿ ಆಟಗಾರರನ್ನು ಸಿದ್ಧಗೊಳಿಸಲು ಬಹಳಷ್ಟು ಕಠಿಣ ಪರಿಶ್ರಮಪಟ್ಟಿದ್ದೇವೆ. ಮುಂಬರುವ ಸರಣಿ ಮತ್ತು ಐಪಿಎಲ್ ಎರಡನ್ನೂ ಗಮನದಲ್ಲಿಟ್ಟುಕೊಂಡು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಂಡದ ಶ್ರೇಷ್ಠ ಆಟಗಾರರು ಸದಾ ಲಭ್ಯರಿರುವಂತೆ ನಿಗಾ ವಹಿಸಲಾಗುತ್ತಿದೆ’ ಎಂದು ಬೇಲಿ ತಿಳಿಸಿದ್ದಾರೆ.

‘ಐಪಿಎಲ್ ಬಗ್ಗೆ ನನಗೆ ಬಹಳ ಗೌರವವಿದೆ. ಟಿ20 ಮಾದರಿಯಲ್ಲಿ ಉತ್ತಮ ಅನುಭವ ನೀಡುವ ಟೂರ್ನಿ ಇದಾಗಿದೆ. ಆಟಗಾರರಿಗೆ ತಮ್ಮ ಕೌಶಲ ವೃದ್ಧಿಸಿಕೊಳ್ಳಲು ಸೂಕ್ತ ವೇದಿಕೆ. ಇದೇ ವರ್ಷ ಟಿ20 ವಿಶ್ವಕಪ್ ನಡೆಯಲಿರುವುದರಿಂದ ಈ ಟೂರ್ನಿಯಲ್ಲಿ ಆಡುವುದು ಮುಖ್ಯ’ ಎಂದು ಬೇಲಿ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ತಂಡವು 1998ರ ನಂತರ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಮಾರ್ಚ್ 29ರಿಂದ ಏಪ್ರಿಲ್ 5ರವರೆಗೆ ಸೀಮಿತ ಓವರ್‌ಗಳ ಸರಣಿಯು ನಡೆಯಲಿದೆ. ಇದರಲ್ಲಿ ಆಡಲಿರುವ 16 ಆಟಗಾರರ ತಂಡಕ್ಕೆ ಆ್ಯರನ್ ಫಿಂಚ್ ನಾಯಕತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.