ADVERTISEMENT

IND vs SL 1st T20I: ಇಶಾನ್ ಅಬ್ಬರ; ಭಾರತಕ್ಕೆ ಜಯದ ಶ್ರೇಯ

ಶ್ರೀಲಂಕಾ ಎದುರಿನ ಟಿ20 ಸರಣಿ: ರೋಹಿತ್ ಶರ್ಮಾ ಬಳಗಕ್ಕೆ ಮನ್ನಡೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 17:40 IST
Last Updated 24 ಫೆಬ್ರುವರಿ 2022, 17:40 IST
ಇಶಾನ್ ಕಿಶನ್
ಇಶಾನ್ ಕಿಶನ್    

ಲಖನೌ: ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಮಾಡಿತು.

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ (89; 56ಎ) ಅವರ ಅಬ್ಬರದ ಬ್ಯಾಟಿಂಗ್ ಮತ್ತು ಶ್ರೇಯಸ್ ಅಯ್ಯರ್ ಮಿಂಚಿನ ಅರ್ಧಶತಕದ ಬಲದಿಂದ ಭಾರತ ತಂಡವು 62 ರನ್‌ಗಳಿಂದ ಶ್ರೀಲಂಕಾ ಎದುರು ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಟಾಸ್ ಗೆದ್ದ ಶ್ರೀಲಂಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ’ಮುಂಬೈ ಇಂಡಿಯನ್ಸ್ ಜೋಡಿ’ ರೋಹಿತ್ ಶರ್ಮಾ ಮತ್ತು ಇಶಾನ್ ಅಮೋಘ ಆರಂಭ ನೀಡಿದರು. ಇದರಿಂದಾಗಿ ಆತಿಥೇಯ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 199 ರನ್ ಗಳಿಸಿತು. ಅದಕ್ಕುತ್ತರವಾಗಿ ಲಂಕಾ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 137 ರನ್ ಗಳಿಸಿತು.

ADVERTISEMENT

ಇಶಾನ್–ರೋಹಿತ್ ಜೊತೆಯಾಟ: ಭಾರತದ ಇನಿಂಗ್ಸ್‌ಗೆ ಆರಂಭಿಕ ಜೋಡಿಯು ಉತ್ತಮ ಅಡಿಪಾಯ ಹಾಕಿತು. ಪವರ್‌ಪ್ಲೇನಲ್ಲಿ 58 ರನ್‌ಗಳು ಸೇರಿದವು. ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ಡೀಪ್‌ ನಲ್ಲಿದ್ದ ಫೀಲ್ಡರ್ ಲಿಯಾಂಗೆ ಅವರು ಇಶಾನ್ ಕೊಟ್ಟ ಕ್ಯಾಚ್ ಕೈಚೆಲ್ಲಿದರು. ಇದರ ಲಾಭ ಪಡೆದ ಇಶಾನ್ ಮತ್ತು ರೋಹಿತ್ ಮೊದಲ ವಿಕೆಟ್ ಜೊತೆಯಾಟದಲ್ಲಿ 111 ರನ್‌ಗಳನ್ನು ಸೇರಿಸಿದರು. ಇಶಾನ್ ಕೇವಲ 30 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದರು.

12ನೇ ಓವರ್‌ನಲ್ಲಿ ರೋಹಿತ್ ವಿಕೆಟ್ ಗಳಿಸಿದ ಲಹಿರು ಕುಮಾರ ಜೊತೆಯಾಟವನ್ನು ಮುರಿದರು. ಈ ಹಂತದಲ್ಲಿ ಇಶಾನ್ ಜೊತೆಗೂಡಿದ ಮತ್ತೊಬ್ಬ ಮುಂಬೈಕರ್ ಶ್ರೇಯಸ್ ಕೂಡ ಬೀಸಾಟವಾಡಿದರು. 17ನೇ ಓವರ್‌ನಲ್ಲಿ ಇಶಾನ್ ಆಟಕ್ಕೆ ತಡೆಯೊಡ್ಡುವಲ್ಲಿ ದಸುನ್ ಶನಕಾ ಯಶಸ್ವಿಯಾದರು. ಅಮೋಘ ಕ್ಯಾಚ್ ಪಡೆದ ಲಿಯಾಂಗೆ ನಿಟ್ಟುಸಿರುಬಿಟ್ಟರು.

ಆದರೆ, ಕೊನೆಯ ಎಸೆತದವರೆಗೂ ಶ್ರೇಯಸ್ ಅಬ್ಬರಕ್ಕೆ ಕಡಿವಾಣ ಹಾಕಲು ಲಂಕಾ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಶ್ರೇಯಸ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅದರಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿದ್ದವು.

ಹೂಡಾ ಪದಾರ್ಪಣೆ: ಆಲ್‌ರೌಂಡರ್ ದೀಪಕ್ ಹೂಡಾ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

26 ವರ್ಷದ ಬಲಗೈ ಆಲ್‌ರೌಂಡರ್ ಹೂಡಾ ಈಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು.

ಋತುರಾಜ್‌ಗೆ ಗಾಯ: ಯುವ ಬ್ಯಾಟರ್ ಋತುರಾಜ್ ಗಾಯಕವಾಡ್ ಗಾಯಗೊಂಡಿದ್ದರಿಂದ ಟಿ20 ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತರಾದರು.

ಇಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ಮಣಿಕಟ್ಟಿನ ನೋವು ಅನುಭವಿಸಿದ್ದರು. ಇದು ಅವರ ಬ್ಯಾಟಿಂಗ್‌ ಮೇಲೆ ಪರಿಣಾಮ ಬೀರುತ್ತಿತ್ತು. ಆದ್ದರಿಂದ ಅವರಿಗೆ ಚಿಕಿತ್ಸೆ ನೀಡಿ ನಿಗಾದಲ್ಲಿರಿಸಲಾಗಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.