ADVERTISEMENT

ಗೆಲುವಿನ ಆರಂಭದತ್ತ ಭಾರತದ ಒಲವು

ಕ್ರಿಕೆಟ್: ಆಸ್ಟ್ರೇಲಿಯಾ ಎದುರಿನ ಮೊದಲ ಟ್ವೆಂಟಿ–20 ಪಂದ್ಯ ಇಂದು

ಪಿಟಿಐ
Published 20 ನವೆಂಬರ್ 2018, 19:36 IST
Last Updated 20 ನವೆಂಬರ್ 2018, 19:36 IST
ಮನೀಷ್ ಪಾಂಡೆ ಮತ್ತು ಕುಲದೀಪ್ ಯಾದವ್
ಮನೀಷ್ ಪಾಂಡೆ ಮತ್ತು ಕುಲದೀಪ್ ಯಾದವ್    

ಬ್ರಿಸ್ಟೇನ್: ವಿದೇಶಿ ನೆಲದಲ್ಲಿ ಭಾರತ ತಂಡ ಗೆಲ್ಲುವುದಿಲ್ಲ ಎಂಬ ಹಣೆಪಟ್ಟಿಯನ್ನು ತೆಗೆದುಹಾಕುವ ಛಲದಲ್ಲಿ ಇರುವ ಭಾರತ ತಂಡವು ಬುಧವಾರ ಇಲ್ಲಿ ಆಸ್ಟ್ರೇಲಿಯಾ ಎದುರಿನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಆಡಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಬಳಗಕ್ಕೆ ಇದು ಸದವಕಾಶ. ಏಕೆಂದರೆ, ಚೆಂಡು ವಿರೂಪ ಪ್ರಕರಣದಲ್ಲಿ ನಿಷೇದ ಶಿಕ್ಷೆ ಎದುರಿಸುತ್ತಿರುವ ಆಸ್ಟ್ರೇಲಿಯಾದ ಪ್ರಮುಖರಾದ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬೆನ್‌ಕ್ರಾಫ್ಟ್‌ ಅವರು ಈ ಸರಣಿಯಲ್ಲಿ ಆಡುತ್ತಿಲ್ಲ. ಆದ್ದರಿಂದ ಹೊಸ ಆಟಗಾರರ ಮೇಲೆ ಆತಿಥೇಯ ತಂಡವು ಅವಲಂಬಿತವಾಗಿದೆ. ಇದರಿಂದಾಗಿ ಭಾರತ ತಂಡವು ಈ ತಂಡವನ್ನು ಸುಲಭವಾಗಿ ಮಣಿಸುವ ಯೋಜನೆಯಲ್ಲಿದೆ.

ಭಾರತ ತಂಡದಲ್ಲಿ ಅನುಭವಿ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಆಡುತ್ತಿಲ್ಲ. ಅವರ ಬದಲಿಗೆ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ.ರಿಷಭ್‌ ಪಂತ್‌ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಭಾರತದಲ್ಲಿ ವೆಸ್ಟ್ ಇಂಡೀಸ್ ಎದುರು ನಡೆದಿದ್ದ ಟ್ವೆಂಟಿ–20 ಸರಣಿ ಯಲ್ಲಿಯೂ ಧೋನಿ ಆಡಿರಲಿಲ್ಲ. ಆ ಸರಣಿಯಲ್ಲಿ ರೋಹಿತ್ ಶರ್ಮಾ ತಂಡ ವನ್ನು ಮುನ್ನಡೆಸಿದ್ದರು. ಇಲ್ಲಿ ಅವರು ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಅವರು ಶಿಖರ್ ಧವನ್ ಜೊತೆಗೆ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಅವರು ಲಯಕ್ಕೆ ಮರಳಲು ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ. ನಾಲ್ವರು ಮಧ್ಯಮ ವೇಗಿಗಳು ಮತ್ತು ಒಬ್ಬರು ಸ್ಪಿನ್ನರ್‌ ಕಣಕ್ಕಿಳಿಯಬಹುದು. ವೇಗಿ ಗಳಿಗೆ ಹೆಚ್ಚು ನೆರವು ನೀಡುವ ಇಲ್ಲಿಯ ಪಿಚ್‌ನಲ್ಲಿ ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್‌ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಅವಕಾಶ ಲಭಿಸಬಹುದು.

ಆತಿಥೇಯ ತಂಡದಲ್ಲಿರುವ ಆ್ಯರನ್ ಫಿಂಚ್ ಅಬ್ಬರದ ಬ್ಯಾಟಿಂಗ್‌ಗೆ ಖ್ಯಾತರಾಗಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿಯೂ (ಐಪಿಎಲ್) ಮಿಂಚಿರುವ ಅವರಿಗೆ ಭಾರತದ ಬೌಲಿಂಗ್ ಪಡೆಯ ಕೌಶಲಗಳ ಪರಿಚಯ ಚೆನ್ನಾಗಿದೆ. ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ‘ಟೆಸ್ಟ್‌’ ಸರಣಿಯಲ್ಲಿ ಆಸ್ಟ್ರೇಲಿಯಾ ‘ಎ’ ತಂಡದಲ್ಲಿ ಬಂದಿದ್ದ ಡಾರ್ಚಿ ಶಾರ್ಟ್, ಬಿಲ್ಲಿ ಸ್ಟಾನ್‌ಲೇಕ್ ಅವರೂ ಭಾರತದ ದಾಳಿಯನ್ನು ಎದುರಿಸುವ ವಿಶ್ವಾಸದಲ್ಲಿದ್ದಾರೆ. ಸ್ಪಿನ್ನರ್ ಆ್ಯಡಂ ಜಂಪಾ, ಆಲ್‌ರೌಂಡರ್ ಗ್ಲೆನ್‌ ಮ್ಯಾಕ್ಸ್‌ವೆಲ್,ಕ್ರಿಸ್‌ ಲಿನ್ ಅವರು ತಂಡಕ್ಕೆ ಉತ್ತಮ ಕಾಣಿಕೆ ನೀಡಬಲ್ಲ ಆಟಗಾರರು.

ಮುಂದುವರೆದ ಸ್ಮಿತ್‌, ವಾರ್ನರ್‌ ನಿಷೇಧ

ಸ್ಟೀವನ್ ಸ್ಮಿತ್‌ ಹಾಗೂ ಡೇವಿಡ್‌ ವಾರ್ನರ್‌ಗೆ ನೀಡಿರುವ ಒಂದು ವರ್ಷ ನಿಷೇಧವನ್ನು ಮುಂದುವರೆಸಲಾಗುತ್ತದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾವು (ಸಿಎ) ಮಂಗಳವಾರ ಘೋಷಿಸಿದೆ.

‘ಆಸ್ಟ್ರೇಲಿಯಾ ತಂಡವು ಇತ್ತೀಚೆಗೆ ವೈಫಲ್ಯ ಅನುಭವಿಸುತ್ತಿದೆ. ಆದ್ದರಿಂದ ಈ ಪ್ರಮುಖ ಆಟಗಾರರ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಬೇಕು’ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆಯು ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪರಿಶೀಲಿಸಿದ ಸಿಎಯು ನರಕಾರತ್ಮಕವಾಗಿ ಪ್ರತಿಕ್ರಿಯಿಸಿದೆ.

ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸುವಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ಮಿತ್‌ ಮತ್ತು ವಾರ್ನರ್‌ ಅವರಿಗೆ ಒಂದು ವರ್ಷ ನಿಷೇಧಿಸಲಾಗಿದೆ.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಖಲೀಲ್ ಅಹಮದ್‌, ವಾಷಿಂಗ್ಟನ್ ಸುಂದರ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಆ್ಯಷ್ಟನ್ ಅಗರ್, ಜೇಸನ್ ಬೆರೆನ್‌ಡ್ರಾಫ್‌, ಅಲೆಕ್ಸ್‌ ಕ್ಯಾರಿ, ನೇಥನ್ ಕೌಲ್ಟರ್‌ ನೈಲ್, ಕ್ರಿಸ್‌ಲಿನ್, ಬೆನ್‌ ಮೆಕ್‌ಡರ್ಮಾಟ್, ಗ್ಲೆನ್ ಮ್ಯಾಕ್ಸ್‌ವೆಲ್, ಡಾರ್ಚಿ ಶಾರ್ಟ್, ಬಿಲ್ಲಿ ಸ್ಟಾನ್‌ಲೇಕ್, ಮಾರ್ಕಸ್‌ ಸ್ಟೊಯಿನಿಸ್, ಆ್ಯಂಡ್ರ್ಯೂ ಟೈ, ಆಡಂ ಜಂಪಾ.

ಸಮಯ: ಮಧ್ಯಾಹ್ನ 1.20

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.