ADVERTISEMENT

ಏಕದಿನ ತಂಡಕ್ಕೆ ಮಯಂಕ್ ಅಗರವಾಲ್

ವೆಸ್ಟ್ ಇಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡ ಪ್ರಕಟ

ಪಿಟಿಐ
Published 11 ಡಿಸೆಂಬರ್ 2019, 20:15 IST
Last Updated 11 ಡಿಸೆಂಬರ್ 2019, 20:15 IST
ವೆಸ್ಟ್ ಇಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಮಯಂಕ್ ಅಗರವಾಲ್ ಅವರು ಕೆ.ಎಲ್. ರಾಹುಲ್ ಜೊತೆಗೆ  ಮಾತುಕತೆ ನಡೆಸಿರುವುದು  –ಪ್ರಜಾವಾಣಿ ಸಂಗ್ರಹ ಚಿತ್ರ
ವೆಸ್ಟ್ ಇಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಮಯಂಕ್ ಅಗರವಾಲ್ ಅವರು ಕೆ.ಎಲ್. ರಾಹುಲ್ ಜೊತೆಗೆ  ಮಾತುಕತೆ ನಡೆಸಿರುವುದು  –ಪ್ರಜಾವಾಣಿ ಸಂಗ್ರಹ ಚಿತ್ರ   

ನವದೆಹಲಿ: ಕರ್ನಾಟಕದ ಮಯಂಕ್ ಅಗರವಾಲ್ ಅವರನ್ನು ವೆಸ್ಟ್ ಇಂಡೀಸ್ ಎದುರಿನ ‌ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ದೆಹಲಿಯ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಶಿಖರ್ ಎಡಮೊಣಕಾಲಿಗೆ ಚೆಂಡು ಬಡಿದು ಪೆಟ್ಟಾಗಿತ್ತು. ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅವರಿಗೆ ಇನ್ನೂ ಸ್ವಲ್ಪ ಸಮಯ ಬೇಕು. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಲಿಲ್ಲ.

ಮಯಂಕ್ ಅವರಿಗೆ ಅವಕಾಶ ನೀಡಲಾಗಿದೆ. ಭಾರತ ತಂಡದಲ್ಲಿ ಈಗಾಗಲೇ ಕರ್ನಾಟಕದ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಇದ್ದಾರೆ.

ADVERTISEMENT

ಮಯಂಕ್ ಅವರು ಸದ್ಯ ದಿಂಡಿಗಲ್‌ನಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಆಡುತ್ತಿದ್ದಾರೆ. ಈ ಪಂದ್ಯದ ನಂತರ ಮಯಂಕ್ ಅವರು ಚೆನ್ನೈಗೆ ತೆರಳುವರು. ಡಿ.15ರಂದು ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಆಡುವರು ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈಚೆಗೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ್ದ ಮಯಂಕ್ ದ್ವಿಶತಕ ಹೊಡೆದಿದ್ದರು. ಅವರಿನ್ನೂ ನಿಗದಿಯ ಓವರ್‌ನಲ್ಲಿ ಪದಾರ್ಪಣೆ ಮಾಡಬೇಕಿದೆ. ಈ ಸಲ ಅವರಿಗೆ ಅವಕಾಶ ಸಿಗುವುದೇ ಎಂದು ಕಾದು ನೋಡಬೇಕು. 28 ವರ್ಷ ವಯಸ್ಸಿನ ಮಯಂಕ್ ಅವರ ಗೆಳೆಯ ಕೆ.ಎಲ್. ರಾಹುಲ್ ಮತ್ತು ರೋಹಿತ್ ಇಬ್ಬರೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದ್ದರಿಂದ ಇವರಿಬ್ಬರೇ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ.

ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವಿಜಯಶಂಕರ್ ಗಾಯಗೊಂಡಾಗಲೂ ಮಯಂಕ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು. ಆದರೆ, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಈ ಸರಣಿಯಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಚೆನ್ನೈ (ಡಿ.15), ವಿಶಾಖಪಟ್ಟಣ (ಡಿ.18) ಮತ್ತು ಕಟಕ್‌ (ಡಿ.22) ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಶಿವಂ ದುಬೆ, ಕೇದಾರ್ ಜಾಧವ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಚಾಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.