ADVERTISEMENT

‘ಬಯೊ ಬಬಲ್‌ ಸಹವಾಸದಿಂದ ಸಾಕಾಯಿತು’–ವಿಂಡೀಸ್‌ ಆಟಗಾರ ರಸೆಲ್‌

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ರಾಯಿಟರ್ಸ್
Published 3 ಜೂನ್ 2021, 10:25 IST
Last Updated 3 ಜೂನ್ 2021, 10:25 IST
ರಸೆಲ್‌
ರಸೆಲ್‌   

ನವದೆಹಲಿ: ಕೋವಿಡ್‌–19 ಪಿಡುಗಿನ ಕಾರಣ ಕ್ರಿಕೆಟ್‌ ಪ್ರವಾಸದ ವೇಳೆ ವ್ಯವಸ್ಥೆ ಮಾಡಲಾಗಿದ್ದ ಬಯೋ ಬಬಲ್‌ (ಜೀವ ಸುರಕ್ಷತಾ ವಲಯ) ವ್ಯವಸ್ಥೆಯಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ವೆಸ್ಟ್‌ ಇಂಡೀಸ್ ಆಲ್‌ರೌಂಡರ್ ಆಂಡ್ರೆ ರಸೆಲ್‌ ಹೇಳಿದ್ದಾರೆ.

ಮೇ 4ರಂದು ಅರ್ಧಕ್ಕೆ ನಿಂತುಹೋಗಿದ್ದ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಅವರು ಕೋಲ್ಕತ್ತ ನೈಟ್‌ ರೈಡರ್ಸ್‌ ಪರ ಆಡಿದ್ದರು. ಆ ಟೂರ್ನಿಯೂ ಬಯೊ ಬಬಲ್‌ ಸುರಕ್ಷಾ ವ್ಯವಸ್ಥೆಯಡಿ ನಡೆದಿತ್ತು. ಮೇ ಆರಂಭದಲ್ಲಿ ಕೆಲವು ಆಟಗಾರರು, ಸಿಬ್ಬಂದಿಗೆ ಸೋಂಕು ಕಂಡುಬಂದ ನಂತರ ಆ ಟೂರ್ನಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿತ್ತು.

ಈ ಟೂರ್ನಿ ಸೆಪ್ಟೆಂಬರ್‌ನಲ್ಲಿ ಮತ್ತೆ ಮುಂದುವರಿಯಲಿದೆ. ಅದಕ್ಕೆ ಮೊದಲು 33 ವರ್ಷದ ರಸೆಲ್‌, ಅಬುಧಾಬಿಯಲ್ಲಿ ಈ ತಿಂಗಳು ನಡೆಯಲಿರುವ ಪಾಕಿಸ್ತಾನ್ ಪ್ರೀಮಿಯರ್‌ ಲೀಗ್‌ನಲ್ಲಿ ಕ್ವೆಟ್ಟಾ ಗ್ಲೇಡಿಯೇಟರ್ಸ್ ಪರ ಆಡಲಿದ್ದಾರೆ. ಈ ಟೂರ್ನಿಯನ್ನು ಈ ಹಿಂದೆ ಮಾರ್ಚ್‌ನಲ್ಲಿ ಕೊರೊನಾ ಸೋಂಕು ಉಪಟಳದಿಂದ ಕಾರಣ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.

ADVERTISEMENT

‘ಈ ಸುರಕ್ಷಾ ವಲಯದಡಿ ಉಳಿದುಕೊಂಡು ಮಾನಸಿಕವಾಗಿ ಬಳಲಿದ್ದೇನೆ. ಈ ಕ್ವಾರಂಟೈನ್ ವ್ಯವಸ್ಥೆಯಿಂದ ನಾನು ಬೇರೆ ಆಟಗಾರ, ಕೋಚ್‌ ಅಥವಾ ಇನ್ನಾರದೇ ಜೊತೆ ಮಾತನಾಡಲು, ಬೆರೆಯಲು ಆಗುತ್ತಿರಲಿಲ್ಲ’ ಎಂದಿದ್ದಾರೆ ರಸೆಲ್‌.

‘ಬಬಲ್‌ನಿಂದ ಬಬಲ್‌, ನಂತರ ಕೊಠಡಿಯೊಳಗೆ ಬಂದಿಯಾಗಿ ನನಗೆ ತಲೆಯೇ ಓಡುತ್ತಿರಲಿಲ್ಲ. ವಾಕ್‌ ಮಾಡಲು ಹೊರಗೆ ಹೋಗುವಂತಿರಲಿಲ್ಲ. ಸಾಮಾಜಿಕವಾಗಿ ಬೆರೆಯಲು ಆಗುತ್ತಿರಲಿಲ್ಲ. ಅದೊಂದು ಬೇರೆಯೇ ಲೋಕ’ ಎಂದಿದ್ದಾರೆ ವಿಂಡೀಸ್‌ನ ಬೀಸು ಹೊಡೆತಗಳ ಆಟಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.