ADVERTISEMENT

ಸಹ ಕ್ರಿಕೆಟಿಗನ ಮೇಲೆ ಹಲ್ಲೆ: ಬಾಂಗ್ಲಾ ಕ್ರಿಕೆಟಿಗ ಹೊಸೈನ್‌ಗೆ 5 ವರ್ಷ ನಿಷೇಧ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 11:37 IST
Last Updated 19 ನವೆಂಬರ್ 2019, 11:37 IST
   

ಢಾಕಾ: ದೇಶಿ ಕ್ರಿಕೆಟ್ ಪಂದ್ಯದ ವೇಳೆ ಸಹ ಆಟಗಾರ ಅರಾಫತ್‌ ಸನ್ನಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಂಗ್ಲಾದೇಶ ವೇಗದ ಬೌಲರ್‌ ಶಹಾದತ್‌ ಹೊಸೈನ್‌ಗೆ ಐದು ವರ್ಷ ನಿಷೇಧ ಶಿಕ್ಷೆ ವಿಧಿಸಲಾಗಿದ್ದು, 2 ವರ್ಷಗಳ ಕಾಲ ಕ್ರಿಕೆಟ್‌ನಿಂದ ಅಮಾನತು ಮಾಡಲಾಗಿದೆ.

ಪ್ರಕರಣ ಸಂಬಂಧ ಈ ನಿರ್ಧಾರ ಕೈಗೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಹೊಸೈನ್‌ಗೆ ₹ 1 ಲಕ್ಷ ದಂಡವನ್ನೂ ವಿಧಿಸಿದೆ.

ಢಾಕಾ ಹಾಗೂ ಖುಲ್ನಾ ಪ್ರಾಂತ್ಯಗಳ ನಡುವಣ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಚೆಂಡನ್ನು ನುಣುಪುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಇದು ವಿಕೋಪಕ್ಕೆ ತಿರುಗಿ ಹೊಸೈನ್‌ ಸನ್ನಿ ಮೇಲೆ ಹಲ್ಲೆ ನಡೆಸಿದ್ದಾರೆ.

ADVERTISEMENT

33 ವರ್ಷದ ಆಟಗಾರ ಹೊಸೈನ್‌, 2005 ರಿಂದ 2015ರ ಅವಧಿಯಲ್ಲಿ ಬಾಂಗ್ಲಾದೇಶ ತಂಡದ ಪರ 38 ಟೆಸ್ಟ್‌, 58 ಏಕದಿನ ಹಾಗೂ ಆರು ಟಿ–20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಹೊಸೈನ್‌, ಬಳಿಕ ತಂಡಕ್ಕೆ ಮರಳಿರಲಿಲ್ಲ.

ಈ ಹಿಂದೆಯೂ ಇಂತಹದೇ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೊಳಗಾಗಿದ್ದ ಅವರು, 2015ರಿಂದ ಈಚೆಗೆ ಯಾವುದೇ ಅಂತರರಾಷ್ಟ್ರೀಯ ಪಂದ್ಯ ಆಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.