ADVERTISEMENT

ಟೆಸ್ಟ್ ಕ್ರಿಕೆಟ್: ಜಸ್‌ಪ್ರೀತ್ ‘ರಿವರ್ಸ್’ ಆಸ್ಟ್ರೇಲಿಯಾ ‘ನರ್ವಸ್’

ಭಾರತಕ್ಕೆ 346 ರನ್‌ಗಳ ಮುನ್ನಡೆ; ಎರಡನೇ ಇನಿಂಗ್ಸ್‌ನಲ್ಲಿ ಎಡವಿದ ವಿರಾಟ್ ಬಳಗ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 20:04 IST
Last Updated 28 ಡಿಸೆಂಬರ್ 2018, 20:04 IST
ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಎಎಫ್‌ಪಿ ಚಿತ್ರ
ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಎಎಫ್‌ಪಿ ಚಿತ್ರ   

ಮೆಲ್ಬರ್ನ್: ‘ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅವಕಾಶವಿದ್ದರೂ ಫಾಲೋ ಆನ್ ಏಕೆ ನೀಡಲಿಲ್ಲ?’

ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆಯ ಸುತ್ತಮುತ್ತಲೇ ಚರ್ಚೆಗಳು ನಡೆದವು. ಎಂಸಿಜಿಯಲ್ಲಿ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ನಿರ್ಧಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು 169.4 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 443 ರನ್‌ಗಳನ್ನು ಗಳಿಸಿದ್ದಾಗ, ಏಕಾಏಕಿ ಡಿಕ್ಲೆರ್ ಮಾಡಿಕೊಂಡಿದ್ದ ವಿರಾಟ್ ನಿರ್ಧಾರ ಅಚ್ಚರಿಗೆ ಕಾರಣವಾಗಿತ್ತು. ಆದರೆ ಅವರ ತೀರ್ಮಾನವೇ ಸರಿ ಎಂದು ವೇಗಿ ಜಸ್‌ಪ್ರೀತ್ ಬೂಮ್ರಾ ಶುಕ್ರವಾರ ಸಾಬೀತು ಮಾಡಿದರು. ತಮ್ಮ ರಿವರ್ಸ್‌ ಸ್ವಿಂಗ್ ಅಸ್ತ್ರದ ಮೂಲಕ ಆತಿಥೇಯ ತಂಡದ ಆರು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡು ತಮ್ಮ ಜೀವನಶ್ರೇಷ್ಠ ಸಾಧನೆ ಮಾಡಿದರು.

ADVERTISEMENT

ಇದರಿಂದಾಗಿ ಟಿಮ್ ಪೇನ್ ಬಳಗವು 151 ರನ್‌ಗಳಿಗೆ ಪತನವಾಯಿತು. 292 ರನ್‌ಗಳ ಮುನ್ನಡೆ ಗಳಿಸಿದ ಭಾರತ ಸಂಭ್ರಮಿಸಿತು. ಈ
ಹಂತದಲ್ಲಿ ಫಾಲೋ ಆನ್‌ ನೀಡುವ ಅವಕಾಶ ಪ್ರವಾಸಿ ತಂಡಕ್ಕೆ ಇತ್ತು. ಆದರೆ ವಿರಾಟ್ ಮತ್ತೆ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆದರೆ, ವೇಗಿ ಪ್ಯಾಟ್‌ ಕಮಿನ್ಸ್‌ (10ಕ್ಕೆ4) ಕೊಟ್ಟ ಪೆಟ್ಟಿನಿಂದಾಗಿ ಕೊಹ್ಲಿ ನಿರ್ಧಾರವು ದುಬಾರಿಯಾಗುವ ಅನುಮಾನ ಮೂಡಿಸಿದೆ. ಆರಂಭಿಕ ಹನುಮವಿಹಾರಿ, ಮೊದಲ ಇನಿಂಗ್ಸ್‌ನ ಶತಕವೀರ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಮರಳಿ ಪೆವಿಲಿಯನ್ ಸೇರಿದ್ದಾರೆ. ಕ್ರೀಸ್‌ನಲ್ಲಿರುವ ಪದಾರ್ಪಣೆ ಆಟಗಾರ ಮಯಂಕ್ ಆಗರವಾಲ್ (ಬ್ಯಾಟಿಂಗ್‌ 28) ಮತ್ತು ರಿಷಭ್ ಪಂತ್ (ಬ್ಯಾಟಿಂಗ್ 6) ಅವರು ದೊಡ್ಡ ಗುರಿ ಪೇರಿಸಲು ಮಹತ್ವದ ಕಾಣಿಕೆ ನೀಡುವ ಭರವಸೆ ಮೂಡಿಸಿದ್ದಾರೆ.

ಸದ್ಯ ಭಾರತ ತಂಡವು 346 ರನ್‌ಗಳ ಮುನ್ನಡೆಯಲ್ಲಿದೆ. ಈ ಪಿಚ್‌ನಲ್ಲಿ ನಾಲ್ಕನೇ ಇನಿಂಗ್ಸ್‌ ಆಡುವ ತಂಡವು ಇದುವರೆಗೆ ಗಳಿಸಿದ್ದ ಸರಾಸರಿ ಮೊತ್ತವು 171 ರನ್‌ಗಳಾಗಿವೆ. ಆದ್ದರಿಂದ ದೊಡ್ಡ ಮೊತ್ತವನ್ನು ಬೆನ್ನತ್ತಿ ಜಯಿಸುವುದು ಆಸ್ಟ್ರೇಲಿಯಾಕ್ಕೆ ಕಷ್ಟವಾಗಲಿದೆ ಎಂದು ಅಂಕಿಶಾಸ್ತ್ರಜ್ಞರು ವಿಶ್ಲೇಷಿಸುತ್ತಿದ್ದಾರೆ. ಇದರಿಂದಾಗಿ ಸದ್ಯದ ಮಟ್ಟಿಗೆ ಭಾರತಕ್ಕೆ ಗೆಲುವಿನ ಅವಕಾಶ ಹೆಚ್ಚು. ಆದರೆ, ಸರಣಿಯಲ್ಲಿ 1–1ರ ಸಮಬಲದಲ್ಲಿರುವ ಎರಡೂ ತಂಡಗಳಿಗೆ ಈ ಪಂದ್ಯದ ಗೆಲುವು ಮಹತ್ವದ್ದಾಗಿದೆ. ವಿರಾಟ್ ಅವರು ಎದುರಾಳಿಗಳಿಗೆ ಫಾಲೋ ಆನ್ ಹೇರದಿರುವ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ತಂಡವು ವಿಜಯ ಸಾಧಿಸಲೇಬೇಕಿದೆ.

ಪ್ಯಾಟ್ ಕಮಿನ್ಸ್‌

ರಣಜಿ ಪಂದ್ಯದ ಅನುಭವ ನೆರವಾಯಿತು: ಬೂಮ್ರಾ

ನಿಧಾನಗತಿಯಲ್ಲಿ ಚೆಂಡು ಪುಟಿಯುವ ಪಿಚ್‌ಗಳಲ್ಲಿ ದೇಶಿ ಪಂದ್ಯಗಳನ್ನು ಆಡಿದ್ದು ರಿವರ್ಸ್‌ ಸ್ವಿಂಗ್ ಕೌಶಲ ಉತ್ತಮಗೊಳಿಸಿಕೊಳ್ಳಲು ನೆರವಾಯಿತು ಎಂದು ಭಾರತ ತಂಡದ ಬೌಲರ್‌ ಜಸ್‌ಪ್ರೀತ್ ಬೂಮ್ರಾ ಹೇಳಿದರು.

ಶುಕ್ರವಾರ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಆರು ವಿಕೆಟ್ ಗಳಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇದು ಅವರ ವೈಯಕ್ತಿಕ ಜೀವನಶ್ರೇಷ್ಠ ಸಾಧನೆಯಾಗಿದೆ.

‘ಚೆಂಡು ಮೃದುವಾಗಿತ್ತು. ವಿಕೆಟ್ ನಿಧಾನವಾಗಿತ್ತು. ಆದ್ದರಿಂದ ಸ್ಲೋ ಬಾಲ್ ಹಾಕುವ ಪ್ರಯತ್ನ ಮಾಡಿದೆ. ಇದು ಫಲ ನೀಡಿತು’ ಎಂದರು.

‘ನನ್ನ ಮೇಲೆ ನನಗೆ ವಿಶ್ವಾಸವಿತ್ತು. ಈ ಸರಣಿಯಲ್ಲಿ ಉತ್ತಮ ಬೌಲಿಂಗ್ ಮಾಡುವ ಇರಾದೆ ಫಲ ನೀಡಿದೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿಯೂ ಆಡಿದ್ದೆ. ಆದರೆ ಇಲ್ಲಿಯದು ಅಲ್ಲಿಗಿಂತಲೂ ವಿಭಿನ್ನ ವಾತಾವರಣ. ಆದ್ದರಿಂದ ನಮ್ಮ ಕೌಶಲಗಳನ್ನು ಇಲ್ಲಿಗೆ ತಕ್ಕಂತೆ ಬದಲಾಯಿಸಿಕೊಂಡು ಆಡಬೇಕಾಗುತ್ತದೆ’ ಎಂದರು.

ಸ್ಕೋರ್‌ ಕಾರ್ಡ್‌

ಭಾರತ ಮೊದಲ ಇನಿಂಗ್ಸ್‌ 7ಕ್ಕೆ 443 ಡಿಕ್ಲೇರ್‌ (169.4 ಓವರ್‌ಗಳಲ್ಲಿ)

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ 151 (66.5 ಓವರ್‌ಗಳಲ್ಲಿ)

(ಶುಕ್ರವಾರದ ಅಂತ್ಯಕ್ಕೆ 6 ಓವರ್‌ಗಳಲ್ಲಿ ವಿಕೆಟ್‌ ಕಳೆದುಕೊಳ್ಳದೆ 8)

ಮಾರ್ಕಸ್‌ ಹ್ಯಾರಿಸ್‌ ಸಿ ಇಶಾಂತ್‌ ಶರ್ಮಾ ಬಿ ಜಸ್‌ಪ್ರೀತ್‌ ಬೂಮ್ರಾ 22

ಆ್ಯರನ್‌ ಫಿಂಚ್‌ ಸಿ ಮಯಂಕ್‌ ಅಗರವಾಲ್‌ ಬಿ ಇಶಾಂತ್ ಶರ್ಮಾ 08

ಉಸ್ಮಾನ್‌ ಖ್ವಾಜಾ ಸಿ ಮಯಂಕ್‌ ಅಗರವಾಲ್‌ ಬಿ ರವೀಂದ್ರ ಜಡೇಜಾ 21

ಷಾನ್‌ ಮಾರ್ಷ್‌ ಎಲ್‌ಬಿಡಬ್ಲ್ಯು ಬಿ ಜಸ್‌ಪ್ರೀತ್‌ ಬೂಮ್ರಾ 19

ಟ್ರಾವಿಸ್‌ ಹೆಡ್‌ ಬಿ ಜಸ್‌ಪ್ರೀತ್‌ ಬೂಮ್ರಾ 20

ಮಿಷೆಲ್‌ ಮಾರ್ಷ್‌ ಸಿ ಅಜಿಂಕ್ಯ ರಹಾನೆ ಬಿ ರವೀಂದ್ರ ಜಡೇಜಾ 09

ಟಿಮ್‌ ಪೇನ್‌ ಸಿ ರಿಷಭ್‌ ಪಂತ್‌ ಬಿ ಜಸ್‌ಪ್ರೀತ್‌ ಬೂಮ್ರಾ 22

ಪ್ಯಾಟ್‌ ಕಮಿನ್ಸ್‌ ಬಿ ಮೊಹಮ್ಮದ್‌ ಶಮಿ 17

ಮಿಷೆಲ್‌ ಸ್ಟಾರ್ಕ್‌ ಔಟಾಗದೆ 07

ನೇಥನ್‌ ಲಯನ್‌ ಎಲ್‌ಬಿಡಬ್ಲ್ಯು ಬಿ ಜಸ್‌ಪ್ರೀತ್‌ ಬೂಮ್ರಾ 00

ಜೋಶ್‌ ಹ್ಯಾಜಲ್‌ವುಡ್‌ ಬಿ ಜಸ್‌ಪ್ರೀತ್‌ ಬೂಮ್ರಾ 00

ಇತರೆ (ಬೈ 4, ವೈಡ್‌ 1, ನೋಬಾಲ್‌ 1) 06

ವಿಕೆಟ್‌ ಪತನ: 1–24 (ಆ್ಯರನ್‌ ಫಿಂಚ್‌ 10.3), 2–36 (ಮಾರ್ಕಸ್‌ ಹ್ಯಾರಿಸ್‌ 13.3), 3–53 (ಉಸ್ಮಾನ್‌ ಖ್ವಾಜಾ 19.5), 4–89 (ಶಾನ್‌ ಮಾರ್ಷ್‌ 32.6), 5–92 (ಟ್ರಾವಿಸ್‌ ಹೆಡ್‌ 36.4), 6–102 (ಮಿಷೆಲ್‌ ಮಾರ್ಷ್‌ 43.3), 7–138 (ಪ್ಯಾಟ್‌ ಕಮಿನ್ಸ್‌ 60.6), 8–147 (ಟಿಮ್‌ ಪೇನ್‌ 64.3), 9–151 (ನೇಥನ್‌ ಲಯನ್‌ 66.2), 10–151(ಜೋಶ್‌ ಹ್ಯಾಜಲ್‌ವುಡ್‌ 66.5)

ಬೌಲಿಂಗ್‌: ಇಶಾಂತ್‌ ಶರ್ಮಾ 13–2–41–1 (ವೈಡ್‌ 1, ನೋಬಾಲ್‌ 1), ಜಸ್‌ಪ್ರೀತ್‌ ಬೂಮ್ರಾ 15.5–4–33–6, ರವೀಂದ್ರ ಜಡೇಜಾ 25–8–45–2, ಮೊಹಮ್ಮದ್‌ ಶಮಿ 10–2–27–1, ಹನುಮ ವಿಹಾರಿ 3–2–1–0

ಭಾರತ ಎರಡನೇ ಇನಿಂಗ್ಸ್‌ 5ಕ್ಕೆ 54 (27 ಓವರ್‌ಗಳಲ್ಲಿ)

ಹನುಮ ವಿಹಾರಿ ಸಿ ಉಸ್ಮಾನ್‌ ಖ್ವಾಜಾ ಬಿ ಪ್ಯಾಟ್‌ ಕಮಿನ್ಸ್‌ 13

ಮಯಂಕ್‌ ಅಗರವಾಲ್‌ ಬ್ಯಾಟಿಂಗ್‌ 28

ಚೇತೇಶ್ವರ ಪೂಜಾರ ಸಿ ಮಾರ್ಕಸ್‌ ಹ್ಯಾರಿಸ್‌ ಬಿ ಪ್ಯಾಟ್‌ ಕಮಿನ್ಸ್‌ 00

ವಿರಾಟ್‌ ಕೊಹ್ಲಿ ಸಿ ಮಾರ್ಕಸ್‌ ಹ್ಯಾರಿಸ್‌ ಬಿ ಪ್ಯಾಟ್‌ ಕಮಿನ್ಸ್‌ 00

ಅಜಿಂಕ್ಯ ರಹಾನೆ ಸಿ ಟಿಮ್‌ ಪೇನ್‌ ಬಿ ಪ್ಯಾಟ್‌ ಕಮಿನ್ಸ್‌ 01

ರೋಹಿತ್‌ ಶರ್ಮಾ ಸಿ ಶಾನ್‌ ಮಾರ್ಷ್ ಬಿ ಜೋಶ್ ಹ್ಯಾಜಲ್‌ವುಡ್ 06

ರಿಷಭ್ ಪಂತ್ ಬ್ಯಾಟಿಂಗ್ 06

ಇತರೆ (ಲೆಗ್‌ಬೈ 1) 01

ವಿಕೆಟ್‌ ಪತನ: 1–28 (ಹನುಮ ವಿಹಾರಿ 12.6), 2–28 (ಚೇತೇಶ್ವರ ಪೂಜಾರ 14.2), 3–28 (ವಿರಾಟ್‌ ಕೊಹ್ಲಿ 14.6), 4–32 (ಅಜಿಂಕ್ಯ ರಹಾನೆ 16.1), 5–44 (ರೋಹಿತ್‌ ಶರ್ಮಾ 22.5)

ಬೌಲಿಂಗ್‌: ಮಿಷೆಲ್‌ ಸ್ಟಾರ್ಕ್‌ 3–1–11–0, ಜೋಶ್‌ ಹ್ಯಾಜಲ್‌ವುಡ್‌ 8–3–13–1, ನೇಥನ್‌ ಲಯನ್‌ 10–1–19–0, ಪ್ಯಾಟ್‌ ಕಮಿನ್ಸ್‌ 6–2–10–4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.