ADVERTISEMENT

ಕ್ರೀಡಾಂಗಣದಲ್ಲೇ ಗಾವಸ್ಕರ್ ಕೂದಲು ಕತ್ತರಿಸಿದ್ದ ಅಂಪೈರ್‌ ಡಿಕೀ ಬರ್ಡ್ ನಿಧನ

ಪಿಟಿಐ
Published 23 ಸೆಪ್ಟೆಂಬರ್ 2025, 13:18 IST
Last Updated 23 ಸೆಪ್ಟೆಂಬರ್ 2025, 13:18 IST
   

ಲಂಡನ್‌: ಕ್ರಿಕೆಟ್‌ ಅಂಗಳದಲ್ಲಿ ವಿಭಿನ್ನ ಶೈಲಿಯ ಅಂಪೈರಿಂಗ್‌ ಮೂಲಕ ಗುರುತಿಸಿಕೊಂಡಿದ್ದ 92 ವರ್ಷದ ಹ್ಯಾರಲ್ಡ್ ಡಿಕೀ ಬರ್ಡ್ ಅವರು ಮಂಗಳವಾರ(ಸೆ.23) ನಿಧನರಾಗಿದ್ದಾರೆ.

1973 ರಿಂದ 1996ರವರೆಗೆ 66 ಟೆಸ್ಟ್‌ ಪಂದ್ಯ ಹಾಗೂ 69 ಏಕದಿನ ಪಂದ್ಯಗಳಿಗೆ ಡಿಕೀ ಬರ್ಡ್ ಅವರು ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು.

ಅವರ ನಿಧನವನ್ನು ಯಾರ್ಕ್‌ಶೈರ್‌ ಕೌಂಟಿ ಕ್ಲಬ್ ಮಂಗಳವಾರ ಹೇಳಿಕೆಯಲ್ಲಿ ದೃಢಪಡಿಸಿದೆ. ‘ಡಿಕೀ ಬರ್ಡ್‌ ಅವರು ಕ್ರೀಡಾಸ್ಫೂರ್ತಿ, ವಿನಯವಂತಿಕೆ ಮತ್ತು ಸಾಫಲ್ಯದ ಪರಂಪರೆಯನ್ನು ಮತ್ತು ತಲೆಮಾರುಗಳ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ’ ಎಂದು ಕ್ಲಬ್ ಹೇಳಿಕೆಯಲ್ಲಿ ಹೇಳಿದೆ.

ADVERTISEMENT

ಯಾರ್ಕ್‌ಶೈರ್‌ ಕೌಂಟಿ ಪರ 1956ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಡಿಕೀ ಬರ್ಡ್, 93 ಪಂದ್ಯಗಳಿಂದ 3,314 ರನ್‌ ಗಳಿಸಿದ್ದರು. 1964 ರಲ್ಲಿ ನಿವೃತ್ತಿ ಘೋಷಿಸಿದ್ದರು.

ಅವರು 1986ರಲ್ಲಿ ಎಂಬಿಇ (ಮೋಸ್ಟ್‌ ಎಕ್ಸಲೆಂಟ್‌ ಆರ್ಡರ್ ಆಫ್ ದಿ ಬ್ರಿಟಿಷ್‌ ಎಂಪೈರ್) ಮತ್ತು 2012ರಲ್ಲಿ ಒಬಿಇ (ಆರ್ಡರ್ ಆಫ್‌ ದಿ ಬ್ರಿಟಿಷ್ ಎಂಪೈರ್‌) ಗೌರವಕ್ಕೆ ಪಾತ್ರರಾಗಿದ್ದರು. ಡಿಕೀ ಬರ್ಡ್ ಮತ್ತು ಡೇವಿಡ್‌ ಶೆಫರ್ಡ್‌ ಜೋಡಿ ಹಲವು ಪಂದ್ಯಗಳಲ್ಲಿ ಜೊತೆಯಾಗಿ ಅಂಪೈರಿಂಗ್ ಮಾಡಿ ಪ್ರಸಿದ್ಧಿ ಪಡೆದಿದ್ದರು. ಶೆಫರ್ಡ್‌ 2009ರಲ್ಲಿ ನಿಧನರಾಗಿದ್ದರು.

ಆಟಗಾರರಿಗೆ ಅಚ್ಚುಮೆಚ್ಚಿನ ಅಂಪೈರ್‌ ಆಗಿದ್ದ ಬರ್ಡ್ ಅವರು ಕರಾರುಕವಾಕ್ ತೀರ್ಪು ನೀಡುವುದಕ್ಕೆ  ಹೆಸರುವಾಸಿಯಾಗಿದ್ದರು. 

ಡಿಕೀ ಬರ್ಡ್ ಅವರು ಕೊನೆಯ ಬಾರಿ 1996ರಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಲಾರ್ಡ್ಸ್‌ ಟೆಸ್ಟ್‌ನಲ್ಲಿ ಅಂಪೈರ್‌ ಆಗಿದ್ದರು. ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್‌ ದ್ರಾವಿಡ್‌ ಹಾಗೂ ಸೌರವ್‌ ಗಂಗೂಲಿ ಆ ಪಂದ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಅವಿವಾಹಿತರಾಗಿದ್ದ ಬರ್ಡ್‌ ಅವರ ಸ್ನೇಹಿತರ ವಲಯ ಬಹುದೊಡ್ಡದಿತ್ತು. ಎಲಿಜಬೆತ್ ರಾಣಿ ಸಹ ಅವರಲ್ಲಿ ಒಳಗೊಂಡಿದ್ದರು. ಅನೇಕ ಬಾರಿ ಚಹಾ ಕೂಟಗಳಲ್ಲಿ ಅವರು ಭಾಗಿಯಾಗಿದ್ದರು. ಪ್ರಧಾನಿಯಾಗಿದ್ದ ಜಾನ್‌ ಮೇಜರ್ ಸೇರಿ ಹಲವು ಗಣ್ಯರು ಅವರ ಮಿತ್ರವೃಂದದಲ್ಲಿದ್ದರು.

ನಿವೃತ್ತಿ ನಂತರ ಅವರು ಕ್ವಿಝ್‌ ಷೊಗಳಲ್ಲಿ, ಚಾರ್ಟ್ ಷೋಗಳಲ್ಲಿ ಭಾಗವಹಿಸುತ್ತಿದ್ದರು.

‘ಸನ್ನಿ’ ಕೇಶ ಕತ್ತರಿಸಿದ್ದ ಬರ್ಡ್‌!

ಅದು 1974ರಲ್ಲಿ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯ. ಭಾರತದ ಆರಂಭ ಆಟಗಾರ ಸುನಿಲ್ ಗಾವಸ್ಕರ್ ಅವರು ಬ್ಯಾಟ್ ಮಾಡುವಾಗ ಕೇಶರಾಶಿ ಕಣ್ಣಿನ ಮೇಲೆ ಬೀಳುತಿದ್ದು ಅವರಿಗೆ ಕಿರಿಕಿರಿಯಾಗಿತ್ತು. ಪಂದ್ಯಕ್ಕೆ ಅಂಪೈರ್ ಆಗಿದ್ದ ಡಿಕೀ ಬರ್ಡ್‌ ಇದನ್ನು ಗಮನಿಸಿ ಕಣ್ಣಿನ ಮೇಲೆ ಬೀಳುತ್ತಿದ್ದ ಕೂದಲನ್ನು ಅಲ್ಲೇ ಕತ್ತರಿಸಿದ್ದರು! ಚೆಂಡಿನ ಸೀಮ್ ದಾರ ಎದ್ದರೆ ಅದನ್ನು ಕತ್ತರಿಸಲು ಅವರು ಪುಟ್ಟಗಾತ್ರದ ಕತ್ತರಿಯನ್ನು ಜೇಬಿನಲ್ಲಿಟ್ಟುಕೊಳ್ಳುತ್ತಿದ್ದರು. ‘ಅಂಪೈರ್‌ಗಳು ಏನೆಲ್ಲಾ ಇಟ್ಟುಕೊಳ್ಳಬೇಕಪ್ಪ!’ ಎಂದೂ ನಂತರ ಉದ್ಗರಿಸಿದ್ದರು. ಅಂದಿನ ಕಾಲದ ಉತ್ತಮ ಆಟಗಾರರೆಲ್ಲ ಅವರ ಬಗ್ಗೆ ಅತೀವ ಗೌರವ ಹೊಂದಿದ್ದರು. ಸೋಬರ್ಸ್‌ ರಿರ್ಚರ್ಡ್ಸ್ ಲಿಲಿ ಮತ್ತು ಬೋಥಮ್ ಅವರೂ ಒಳಗೊಂಡಿದ್ದರು. ಈ ಬಗ್ಗೆ ಸ್ವತಃ ಬರ್ಡ್‌ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.