ADVERTISEMENT

ಜೀವನಪೂರ್ತಿ ಕ್ರಿಕೆಟ್ ಧ್ಯಾನಿಸಿದ ಪಿಎಸ್‌ವಿ: ಜಿ.ಆರ್. ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 5:45 IST
Last Updated 4 ಮಾರ್ಚ್ 2023, 5:45 IST
ಪಿ.ಎಸ್. ವಿಶ್ವನಾಥ್
ಪಿ.ಎಸ್. ವಿಶ್ವನಾಥ್   

ಬೆಂಗಳೂರು: ‘ಪಿ.ಎಸ್. ವಿಶ್ವನಾಥ್ ಅವರಿಗೆ ಕ್ರಿಕೆಟ್ ಸರ್ವಸ್ವವೂ ಆಗಿತ್ತು. ಜೀವನದುದ್ದಕ್ಕೂ ಕ್ರಿಕೆಟ್‌ ಆಟವನ್ನೇ ಧ್ಯಾನಿಸಿದರು. ಅವರಿಗೆ ಪ್ರತಿಭೆಗಳನ್ನು ಗುರುತಿಸುವ ಕಲೆ ಸಿದ್ಧಿಸಿತ್ತು. ನಾನು ಸ್ಕ್ವೇರ್ ಕಟ್ ಮತ್ತು ಲೇಟ್‌ ಕಟ್ ಆಡಬಲ್ಲೆ ಎಂದು ಅವರಿಗೆ ಆಗಲೇ ಗೊತ್ತಿತ್ತು’ ಎಂದು ಕ್ರಿಕೆಟ್ ದಂತಕಥೆ ಜಿ.ಆರ್. ವಿಶ್ವನಾಥ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ಅವರಿಗೆ ಬಾಲ್ಯದಲ್ಲಿ ಕೋಚ್ ಆಗಿದ್ದ ಪಿ.ಎಸ್. ವಿಶ್ವನಾಥ್ (97) ಶುಕ್ರವಾರ ಬೆಳಗಿನ ಜಾವ ನಿಧನರಾದರು.

ಪುಟ್ಟಣ್ಣಚೆಟ್ಟಿಯವರ ಮೊಮ್ಮಗ ವಿಶ್ವನಾಥ್ ಬಲಗೈ ಬ್ಯಾಟರ್ ಆಗಿದ್ದರು. ಅವರು ಮೈಸೂರು ರಾಜ್ಯ ತಂಡವನ್ನು ರಣಜಿ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು. ಆದರೆ ಪಿಎಸ್‌ವಿ ಎಂದೇ ಚಿರಪರಿಚಿತರಾಗಿದ್ದ ಅವರು ಕೋಚ್ ಆಗಿ ಮಾಡಿದ ಸಾಧನೆ ಹೆಚ್ಚು ಜನಪ್ರಿಯ.

ADVERTISEMENT

‘ನಾನು ಚಿಕ್ಕವನಿದ್ದಾಗ ಚಾಮರಾಜಪೇಟೆಯಲ್ಲಿರುವ ಸ್ಪಾರ್ಟನ್ಸ್‌ ಕ್ಲಬ್‌ನಲ್ಲಿ ಆಡುತ್ತಿದ್ದೆ. ನನ್ನ ಮಾರ್ಗದರ್ಶಕರಾಗಿದ್ದ ಚಂದ್ರಶೇಖರ್ ಶೆಟ್ಟಿಯವರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಆ ಮೂಲಕ ನನಗೆ ಪಿಎಸ್‌ವಿ ಪರಿಚಿತ ರಾಗಿದ್ದರು. ನಂತರ ಮೈಸೂರು ರಾಜ್ಯ ಸ್ಪೋರ್ಟ್ಸ್‌ ಕೌನ್ಸಿಲ್‌ನಲ್ಲಿ ಶಿಬಿರ ಸೇರಿದೆ. ಅಲ್ಲಿ ಪಿಎಸ್‌ವಿ ಕೋಚ್ ಆಗಿದ್ದರು. ಉದಾರ ಹೃದಯದ ವ್ಯಕ್ತಿ ಅವರು. ಅವರಿಂದ ಬಹಳಷ್ಟು ವಿಷಯ ಕಲಿತೆ. ಅಂತಹ ಮೇರುವ್ಯಕ್ತಿಯೊಂದಿಗೆ ಇದ್ದಾಗ ನಾವು ಕೂಡ ಶಿಸ್ತು ಕಲಿಯುತ್ತೇವೆ’ ಎಂದು ಜಿಆರ್‌ವಿ ನೆನಪಿಸಿಕೊಂಡರು.

ಪಿಎಸ್‌ವಿ ಅವರ ಮಾರ್ಗದರ್ಶನದಲ್ಲಿ ಬ್ರಿಜೇಶ್ ಪಟೇಲ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಸುನೀಲ್ ಜೋಶಿ ಕೂಡ ತಮ್ಮ ಕೌಶಲ ಗಳನ್ನು ಉತ್ತಮಪಡಿಸಿಕೊಂಡಿದ್ದರು.

1948–49ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಪಿಎಸ್‌ವಿ ಪದಾರ್ಪಣೆ ಮಾಡಿದ್ದರು. 1957–58ರಲ್ಲಿ ಕೇರಳದ ವಿರುದ್ಧ ಮಂಗಳೂರಿನಲ್ಲಿ ಆಡಿದ್ದು ಕೊನೆಯ ಪಂದ್ಯವಾಗಿದೆ.

ಒಟ್ಟು ಒಂಬತ್ತು ಪಂದ್ಯಗಳಿಂದ 408 ರನ್‌ ಗಳಿಸಿದ್ದಾರೆ. ಒಂದು ಶತಕ ಹಾಗೂ ಮೂರು ಅರ್ಧಶತಕಗಳನ್ನು ಗಳಿಸಿದ್ದರು. 1950–51ರಲ್ಲಿ ಕಾಮನ್‌ವೆಲ್ತ್ ಇಲೆವನ್ ವಿರುದ್ಧದ ಪಂದ್ಯದಲ್ಲಿ ಮೈಸೂರು ಪರವಾಗಿ ಆಡಿದ್ದರು. ಎಂಸಿಸಿ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸಿದ್ದರು. ಆಟದಿಂದ ನಿವೃತ್ತಿಯ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಉಪಾಧ್ಯಕ್ಷರೂ ಆಗಿದ್ದರು. ಎರಡು ರಣಜಿ ಟ್ರೋಫಿ ಪಂದ್ಯಗಳಲ್ಲಿ ರೆಫರಿಯಾಗಿಯೂ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.