ADVERTISEMENT

ಚೆಂಡು ವಿರೂಪಗೊಳಿಸಿದ ಪೂರನ್‌ ಅಮಾನತು

ಪಿಟಿಐ
Published 13 ನವೆಂಬರ್ 2019, 19:45 IST
Last Updated 13 ನವೆಂಬರ್ 2019, 19:45 IST
ನಿಕೋಲಸ್ ಪೂರನ್
ನಿಕೋಲಸ್ ಪೂರನ್   

ದುಬೈ: ಅಫ್ಗಾನಿಸ್ತಾನ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳಲ್ಲಿ ಆಡದಂತೆ ನಿಷೇಧ ಹೇರಲಾಗಿದೆ.

ತಪ್ಪು ಒಪ್ಪಿಕೊಂಡಿರುವ ಪೂರನ್ ಅವರೂ ಬಹಿರಂಗ ಕ್ಷಮೆ ಕೋರಿದ್ದಾರೆ. ಪೂರನ್ ಅವರು ಮುಂಬರಲಿರುವ ಟ್ವೆಂಟಿ–20 ಸರಣಿಯ ನಾಲ್ಕು ಪಂದ್ಯಗಳಲ್ಲಿ ಆಡುವುದಿಲ್ಲ.

ಲಖನೌನಲ್ಲಿ ಸೋಮವಾರ ನಡೆದಿದ್ದ ಏಕದಿನ ಪಂದ್ಯದಲ್ಲಿ ಪೂರನ್ ಅವರು ಚೆಂಡನ್ನು ವಿರೂಪಗೊಳಿಸಿದ್ದು ಬೆಳಕಿಗೆ ಬಂದಿತ್ತು. ಕಾರ್ಯನಿರತ ಅಂಪೈರ್‌ಗಳಾದ ಬಿಸ್ಮಿಲ್ಲಾ ಶಿನ್ವಾರಿ, ಅಹಮದ್ ದುರಾನಿ, ಮೂರನೇ ಅಂಪೈರ್ ಅಹಮದ್ ಪಖ್ತೀನ್ ಮತ್ತು ನಾಲ್ಕನೇ ಅಂಪೈರ್ ಇಜಾತ್ ಉಲ್ಲಾ ಸಫಿ ಅವರೂ ಇದನ್ನು ದೃಢಪಡಿಸಿದ್ದಾರೆ. ಪಂದ್ಯ ರೆಫರಿ ಕ್ರಿಸ್ ಬ್ರಾಡ್ ಅವರು ಶಿಕ್ಷೆಯನ್ನು ಪ್ರಕಟಿಸಿದ್ಧಾರೆ.

ADVERTISEMENT

ಐಸಿಸಿಯ ಲೆವಲ್ ತ್ರೀ ನಿಯಮದ ಉಲ್ಲಂಘನೆ ಇದಾಗಿದೆ. ಇದರಲ್ಲಿ ನಾಲ್ಕು ಪಂದ್ಯಗಳ ಅಮಾನತು ಶಿಕ್ಷೆ ನೀಡಲಾಗುತ್ತದೆ.

‘ಪೂರನ್ ಅವರಿಗೆ 2.14ರ ನಿಯಮದ ಪ್ರಕಾರ ಶಿಕ್ಷೆ ವಿಧಿಸಲಾಗಿದೆ. ‌ಚೆಂಡಿನ ನೈಜ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸಿರುವುದು ದೃಢಪಟ್ಟಿದೆ. ಅವರು ತಮ್ಮ ಹೆಬ್ಬೆರಳಿನ ಉಗುರಿನಿಂದ ಚೆಂಡಿನ ಮೇಲ್ಮೈ ಅನ್ನು ಕೆರೆದು ತೆಗೆಯುವ ದೃಶ್ಯಗಳು ವಿಡಿಯೊ ತುಣುಕುಗಳಲ್ಲಿ ದಾಖಲಾಗಿವೆ. ಅವುಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಬ್ರಾಡ್ ಹೇಳಿದ್ದಾರೆ.

‘ನನ್ನ ತಪ್ಪು ಮಾಡಿರುವುದು ನಿಜ. ಐಸಿಸಿ ನೀಡಿರುವ ಶಿಕ್ಷೆಯನ್ನೂ ಒಪ್ಪಿಕೊಳ್ಳುತ್ತೇನೆ. ಇಂತಹ ತಪ್ಪನ್ನು ಮುಂದೆ ಮಾಡುವುದಿಲ್ಲ. ಅದಕ್ಕಾಗಿ ನನ್ನ ತಂಡದ ಸಹ ಆಟಗರರು, ಕ್ರಿಕೆಟ್‌ಪ್ರೇಮಿಗಳಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಪೂರನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.