
ಚೆನ್ನೈ: ಇದೇ ತಿಂಗಳು ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಚೆನ್ನೈ ಸೂಪರ್ ಕಿಂಗ್ಸ್ ಪೂರ್ವಸಿದ್ಧತೆಯನ್ನು ಆರಂಭಿಸಿದೆ.
ಬೌಲರ್ ದೀಪಕ್ ಚಾಹರ್ ಶನಿವಾರ ಅಭ್ಯಾಸದಲ್ಲಿದ್ದರು. ಭಾರತ ತಂಡಕ್ಕೆ ಮರಳುವ ಛಲದಲ್ಲಿದ್ದಾರೆ. ಐಪಿಎಲ್‌ನ ಎಲ್ಲ ಪಂದ್ಯಗಳಲ್ಲಿಯೂ ಆಡಿ ಆಯ್ಕೆಗಾರರ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ.
‘ತಂಡದಲ್ಲಿರುವ ಭಾರತೀಯ ಆಟಗಾರರ ಮೊದಲ ಬ್ಯಾಚ್ ಶುಕ್ರವಾರ ಇಲ್ಲಿಗೆ ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಉಳಿದವರೆಲ್ಲರೂ ಬಂದು ಸೇರಿಕೊಳ್ಳುವ ನಿರೀಕ್ಷೆ ಇದೆ’ ಎಂದು ತಮಿಳುನಾಡು ಕ್ರಿಕಟ್ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲ ಬ್ಯಾಚ್‌ನಲ್ಲಿ ವೇಗಿಗಳಾದ ದೀಪಕ್ ಚಾಹರ್, ಸಿಮರ್‌ಜೀತ್ ಸಿಂಗ್, ಮುಕೇಶ್ ಚೌಧರಿ, ಸ್ಪಿನ್ನರ್ ಪ್ರಶಾಂತ್ ಸೋಳಂಕಿ, ಆಲ್‌ರೌಂಡರ್ ರಾಜವರ್ಧನ್ ಹಂಗರಗೆಕರ್ ಹಾಗೂ ಅಜಯ್ ಮಂಡಲ್ ಇದ್ದಾರೆ.
ಕಳೆದ ಡಿಸೆಂಬರ್‌ನಿಂದಲೂ ದೀಪಕ್ ಚಾಹರ್ ಕ್ರಿಕೆಟ್ ಆಡಿಲ್ಲ. ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಿಂದ ಅವರು ಹಿಂದೆ ಸರಿದಿದ್ದರು. ನಂತರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಅವರು ಹೋಗಿರಲಿಲ್ಲ. ತಮ್ಮ ತಂದೆಯ ಅನಾರೋಗ್ಯದ ಕಾರಣ ಅವರು ಸರಣಿಯಲ್ಲಿ ಆಡಿರಲಿಲ್ಲ.
ಹೋದ ತಿಂಗಳು ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ತರಬೇತಿ ಪಡೆದ ನಂತರ ಫಿಟ್ ಎಂದು ಘೋಷಿಸಿಕೊಂಡಿದ್ದರು.
ಅಭಿಮಾನಿಗಳ ಕಣ್ಮಣಿ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಅಭ್ಯಾಸಕ್ಕೆ ಬರುವ ದಿನಾಂಕ ಇನ್ನೂ ಖಚಿತಪಡಿಸಿಲ್ಲ. ಶುಕ್ರವಾರ ಅವರು ತಮ್ಮ ಪತ್ನಿ ಸಾಕ್ಷಿ ಅವರೊದಿಗೆ ಜಾಮನಗರದಲ್ಲಿದ್ದರು. ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾರ್ಚ್ 22ರಂದು ಚೆನ್ನೈ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೊದಲ ಪಂದ್ಯ ಆಡಲಿದೆ. ಇದು ಟೂರ್ನಿಯ ಉದ್ಘಾಟನೆ ಪಂದ್ಯವೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.