ADVERTISEMENT

Champions Trophy | ಅಫ್ಗನ್ ತಂಡಕ್ಕೆ ಪದಾರ್ಪಣೆಯಲ್ಲಿ ಜಯದ ಕನಸು

ಪಿಟಿಐ
Published 21 ಫೆಬ್ರುವರಿ 2025, 0:30 IST
Last Updated 21 ಫೆಬ್ರುವರಿ 2025, 0:30 IST
ಅಫ್ಗಾನಿಸ್ತಾನದ ರಶೀದ್ ಖಾನ್ 
ಅಫ್ಗಾನಿಸ್ತಾನದ ರಶೀದ್ ಖಾನ್    

ಕರಾಚಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪದಾರ್ಪಣೆ ಮಾಡುತ್ತಿರುವ ಅಫ್ಗಾನಿಸ್ತಾನ ತಂಡವು ಶುಕ್ರವಾರ ನಡೆಯಲಿರುವ ಬಿ ಗುಂಪಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. 

ಈ ಬಾರಿಯಾದರೂ ಪ್ರಶಸ್ತಿ ಗೆದ್ದು ‘ಚೋಕರ್ಸ್’ ಹಣೆಪಟ್ಟಿ ಕಳೆದುಕೊಳ್ಳುವ ಛಲದಲ್ಲಿ ದಕ್ಷಿಣ ಆಫ್ರಿಕಾ ತಂಡವಿದೆ. ಆದರೆ ಕಳೆದ ವಿಶ್ವಕಪ್ ಟೂರ್ನಿಗಳಲ್ಲಿ ಘಟಾನುಘಟಿಗಳಿಗೆ ಆಘಾತ ನೀಡಿರುವ ಅಫ್ಗನ್ ತಂಡವು ಇಲ್ಲಿ ಮತ್ತೊಮ್ಮೆ ತನ್ನ ಅಚ್ಚರಿಯ ಆಟ ತೋರಲು ಸಜ್ಜಾಗಿದೆ. 

ದಕ್ಷಿಣ ಆಫ್ರಿಕಾ ತಂಡವು 1998ರಲ್ಲಿ ನಾಕೌಟ್ ಟ್ರೋಫಿ ಎಂಬ ಹೆಸರಿನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಅದಾದ ನಂತರ ಹಲವು ಶ್ರೇಷ್ಠ ಕ್ರಿಕೆಟಿಗರನ್ನು ನೀಡಿರುವ ದಕ್ಷಿಣ ಆಫ್ರಿಕಾ ಇದುವರೆಗೆ ಮತ್ತೊಂದು  ಐಸಿಸಿ ಟ್ರೋಫಿ ಜಯಿಸಲು ಸಾಧ್ಯವಾಗಿಲ್ಲ. ನಾಕೌಟ್ ಹಂತಗಳಲ್ಲಿ ಗೆಲುವಿನ ಸನಿಹದಲ್ಲಿ ಸೋತಿದ್ದೇ ಹೆಚ್ಚು. 

ADVERTISEMENT

ಈ ಬಾರಿ ತೆಂಬಾ ಬವುಮಾ ನಾಯಕತ್ವದಲ್ಲಿ ಟೋನಿ ಡಿ ಜಾರ್ಜಿ, ರೆಸಿ ವ್ಯಾನ್ ಡೆರ್ ಡಸೆ, ಏಡನ್ ಮರ್ಕರಂ, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟನ್ ಸ್ಟಬ್ಸ್‌ ಅವರು ಇರುವ ಬಳಗವು ಸಿದ್ಧವಾಗಿದೆ. ಏನ್ರಿಚ್ ನಾಕಿಯಾ, ನಾಂದ್ರೆ ಬರ್ಗರ್ ಮತ್ತು ಗೆರಾಡ್ ಕೊಯ್ಟಜಿ ಅವರು ಗಾಯದಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ವೇಗಿಗಳಾದ ಕಗಿಸೊ ರಬಾಡ, ಲುಂಗಿ ಗಿಡಿ, ಸ್ಪಿನ್ನರ್ ಕೇಶವ್ ಮಹಾರಾಜ್ ಮತ್ತು ತಬ್ರೇಜ್ ಶಮ್ಸಿ ಅವರ ಮೇಲೆ ಬೌಲಿಂಗ್ ವಿಭಾಗ ಅವಲಂಬಿತವಾಗಿದೆ. 

ದಕ್ಷಿಣ ಆಫ್ರಿಕಾ ತಂಡವು ಈ ಟೂರ್ನಿಗೆ ಬರುವ ಮುನ್ನ ಆರು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಸೋತಿತ್ತು. 

ಈ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳೂ ಇವೆ. ಆದರೆ, ಆಸ್ಟ್ರೇಲಿಯಾದಲ್ಲಿ ಗಾಯದಿಂದಾಗಿ ಪ್ರಮುಖ ಆಟಗಾರರು ಗೈರುಹಾಜರಾಗಿದ್ದಾರೆ. ಇಂಗ್ಲೆಂಡ್ ತಂಡದ ಆಟಗಾರರು ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇದರಿಂದಾಗಿ ಅಫ್ಗಾನಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸುವ ಛಲದಲ್ಲಿದೆ. ಹಸ್ಮತ್‌ಉಲ್ಲಾ ಶಹೀದಿ ನಾಯಕತ್ವದ ತಂಡಕ್ಕೆ ಅನುಭವಿ ಆಲ್‌ರೌಂಡರ್ ರಶೀದ್ ಖಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್ ಅವರೇ ಪ್ರಮುಖ ಶಕ್ತಿಯಾಗಿದ್ದಾರೆ. 

ಪಂದ್ಯ ಆರಂಭ: ಮಧ್ಯಾಹ್ನ 2.30

ನೇರಪ್ರಸಾರ: ಸ್ಟಾರ್‌ ಸ್ಫೋರ್ಟ್ಸ್, ಜಿಯೊ ಹಾಟ್‌ಸ್ಟಾರ್

ತೆಂಬಾ ಬವುಮಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.