ADVERTISEMENT

ಒಂದರ ಹಿಂದೊಂದು ಟಿ20 ವಿಶ್ವಕಪ್: ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಲಿರುವ ವಾರ್ನರ್

ಏಜೆನ್ಸೀಸ್
Published 11 ಫೆಬ್ರುವರಿ 2020, 10:56 IST
Last Updated 11 ಫೆಬ್ರುವರಿ 2020, 10:56 IST
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್   

ಮೆಲ್ಬೋರ್ನ್‌:ಇದೇ ವರ್ಷ ತವರಿನಲ್ಲಿ ಹಾಗೂ ಮುಂದಿನ ವರ್ಷ ಭಾರತದಲ್ಲಿ ನಡೆಯುವಟಿ20 ವಿಶ್ವಕಪ್‌ ಟೂರ್ನಿಗಳ ಬಳಿಕ ಚುಟುಕು ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಬಗ್ಗೆಆಲೋಚಿಸುತ್ತಿರುವುದಾಗಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ತಿಳಿಸಿದ್ದಾರೆ.

‘ನಾವು ಒಂದರ ಹಿಂದೊಂದು ವಿಶ್ವಕಪ್‌ ಟೂರ್ನಿಗಳನ್ನು ಹೊಂದಿದ್ದೇವೆ. ಹಾಗಾಗಿ ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಆ ಮಾದರಿಗೆ ವಿದಾಯ ಹೇಳಲಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

‘ಮೂರೂ ಮಾದರಿಗಳಲ್ಲಿ ಆಡುವುದು ನನಗೆ ತುಂಬಾ ಕಠಿಣ. ಅದೇ ರೀತಿ (ಮೂರೂ ಮಾದರಿಯಲ್ಲಿ) ಆಡಲು ಬಯಸುವವರಿಗೆ ಶುಭವಾಗಲಿ. ನೀವು ವೀರೇಂದ್ರ ಸೆಹ್ವಾಗ್‌, ಎಬಿಡಿ ವಿಲಿಯರ್ಸ್‌ ಅವರಂತಹವರು ಮೂರೂ ಮಾದರಿಯಲ್ಲಿ ಬಹಳ ಕಾಲ ಆಡಿದ್ದಾರೆ. ಅದು ನಿಜವಾಗಿಯೂ ಸವಾಲಿನದ್ದಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಮೂರು ಸಣ್ಣ ಮಕ್ಕಳು ಮತ್ತು ಹೆಂಡತಿ ಯಾವಾಗಲೂ ಮನೆಯಲ್ಲೇ ಇರುವಾಗನಿರಂತರವಾಗಿ ಪ್ರಯಾಣ ಮಾಡುವುದೂ ತುಂಬಾ ಕಠಿಣವಾದದ್ದು. ಹಾಗಾಗಿ ಒಂದು ವೇಳೆ ನಾನು ಒಂದು ಮಾದರಿಯಿಂದ ಹೊರಬರಲು ಸಾಧ್ಯವಾಗುವುದಾದರೆ, ಖಂಡಿತಾ ಅದು ಟಿ20ಯೇ ಆಗಿರಲಿದೆ’ ಎಂದು ಹೇಳಿದ್ದಾರೆ.

ಈ ಬಾರಿಯ ಬಿಗ್‌ ಬ್ಯಾಷ್‌ ಲೀಗ್‌ನಿಂದಲೂ ದೂರ ಉಳಿದಿದ್ದ ಅವರು, ಮಾನಸಿಕ, ದೈಹಿಕ ಆರೋಗ್ಯದ ದೃಷ್ಟಿಯಿಂದ ಮತ್ತು ಮುಂದಿನ ಸರಣಿಗೆ ನನ್ನನ್ನು ನಾನು ಸಜ್ಜುಗೊಳಿಸಿಕೊಳ್ಳುವ ಸಲುವಾಗಿ ಬಿಡುವು ಪಡೆದಿದ್ದಾಗಿ ಹೇಳಿದ್ದಾರೆ.

ಇದುವರೆಗೆ 76 ಟಿ20 ಪಂದ್ಯಗಳನ್ನು ಆಡಿರುವ ವಾರ್ನರ್‌, ಒಂದು ಶತಕ ಹಾಗೂ 15 ಅರ್ಧಶತಕಗಳ ಸಹಿತ 2079 ರನ್ ಬಾರಿಸಿದ್ದಾರೆ.ಆಸ್ಟ್ರೇಲಿಯಾದ ಈ ವರ್ಷದ ಕ್ರಿಕೆಟಿಗ ಪ್ರಶಸ್ತಿ ಸೋಮವಾರವಷ್ಟೇ ವಾರ್ನರ್‌ಗೆ ಒಲಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.