ADVERTISEMENT

ಇಂಗ್ಲೆಂಡ್‌ ಜಯದ ಕನಸಿಗೆ ಮಳೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 15:39 IST
Last Updated 27 ಜುಲೈ 2020, 15:39 IST
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆಟಕ್ಕೆ ಮಳೆ ಅಡ್ಡಿಪಡಿಸಿದೆ –ಎಎಫ್‌ಪಿ ಚಿತ್ರ
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆಟಕ್ಕೆ ಮಳೆ ಅಡ್ಡಿಪಡಿಸಿದೆ –ಎಎಫ್‌ಪಿ ಚಿತ್ರ   

ಮ್ಯಾಂಚೆಸ್ಟರ್: ನಿರ್ಣಾಯಕ ಮೂರನೇ ಟೆಸ್ಟ್‌ನಲ್ಲಿ ಜಯ ಗಳಿಸುವ ಆತಿಥೇಯ ಇಂಗ್ಲೆಂಡ್ ತಂಡದ ಕನಸಿಗೆ ಮಳೆ ಅಡ್ಡಿಯಾಗಿದೆ. ಇಲ್ಲಿನ ಓಲ್ಡ್ ಟ್ರಾಫರ್ಡ್ ಅಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್‌ ಎದುರಿನ ಪಂದ್ಯದ ನಾಲ್ಕನೇ ದಿನ ಒಂದು ಎಸೆತ ಕೂಡ ಹಾಕಲು ಆಗಲಿಲ್ಲ. ಚಹಾ ವಿರಾಮದ ನಂತರ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.

399 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಜೇಸನ್ ಹೋಲ್ಡರ್ ನೇತೃತ್ವದ ಪ್ರವಾಸಿ ತಂಡ ಮೂರನೇ ದಿನದಾಟದ ಮುಕ್ತಾಯದ ವೇಳೆ ಆರು ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 10 ರನ್ ಗಳಿಸಿತ್ತು. ಪಂದ್ಯವನ್ನು ಡ್ರಾ ಮಾಡಿಕೊಂಡು ಸರಣಿಯಲ್ಲಿ ಸಮಬಲ ಸಾಧಿಸಬೇಕಾದರೆ ವೆಸ್ಟ್ ಇಂಡೀಸ್ ಉಳಿದಿರುವ ಎಂಟು ವಿಕೆಟ್‌ಗಳಲ್ಲಿ ಎರಡು ದಿನ ಪೂರ್ತಿ ಬ್ಯಾಟಿಂಗ್ ಮಾಡಬೇಕಾದ ಅನಿವಾರ್ಯ ಸ್ಥಿತಿ ಇತ್ತು. ಆದರೆ ಸೋಮವಾರ, ತಂಡಕ್ಕೆ ಮಳೆ ನೆರವಾಯಿತು. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್ : 111.5 ಓವರ್‌ಗಳಲ್ಲಿ 369; ವೆಸ್ಟ್ ಇಂಡೀಸ್: 65 ಓವರ್‌ಗಳಲ್ಲಿ 197; ಎರಡನೇ ಇನಿಂಗ್ಸ್, ಇಂಗ್ಲೆಂಡ್‌: 58 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 226 ಡಿಕ್ಲೇರ್; ವೆಸ್ಟ್ ಇಂಡೀಸ್: 6 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 10 (ಕ್ರೇಗ್ ಬ್ರಾಥ್‌ವೇಟ್ ಬ್ಯಾಟಿಂಗ್ 2, ಶಾಯ್ ಹೋಪ್ ಬ್ಯಾಟಿಂಗ್ 4; ಸ್ಟುವರ್ಟ್ ಬ್ರಾಡ್ 8ಕ್ಕೆ2). ಮೂರನೇ ದಿನದಾಟದ ಮುಕ್ತಾಯಕ್ಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.